ದೋಹಾದ ‘ಕರ್ನಾಟಕ ರಾಜ್ಯೋತ್ಸವ ಕಪ್ 2026’ ಚಾಂಪಿಯನ್ ಪಟ್ಟ ಅಲಂಕರಿಸಿದ ಮರ್ಬು ತಂಡ
- by Suddi Loka
- November 26, 2026
- 6 Views
ದೋಹಾ: ಕರ್ನಾಟಕ ಸಂಘ ಕತಾರ್ (KSQ) ಮತ್ತು ಕರ್ನಾಟಕ ರಾಯಲ್ಸ್ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ‘ಕರ್ನಾಟಕ ರಾಜ್ಯೋತ್ಸವ ಕಪ್ (KRC) 2026 – ಸೀಸನ್ 2’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹನಾನ್ ಸಿಸಿ ತಂಡವನ್ನು ಮಣಿಸಿದ ಮರ್ಬು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ನವೆಂಬರ್ 17ರಿಂದ 21ರವರೆಗೆ ಬರ್ವಾ ವಿಲೇಜ್ನ KREEQ ಸ್ಪೋರ್ಟ್ಸ್ ಮೈದಾನದಲ್ಲಿ ನಡೆದ ಐದು ದಿನಗಳ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು. ಲೀಗ್ ಹಂತದ ಬಳಿಕ ನಡೆದ ಸೆಮಿಫೈನಲ್ನಲ್ಲಿ ಹನಾನ್ ಸಿಸಿ ತಂಡ ಬಿಟಿ ಗ್ಯಾಂಗ್ ವಿರುದ್ಧ ಗೆಲುವು ಸಾಧಿಸಿದರೆ, ಮರ್ಬು ತಂಡ ಅಲಯನ್ಸ್ ಕತಾರ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಅಂತಿಮ ಪಂದ್ಯದಲ್ಲಿ ಮರ್ಬು ತಂಡ ಸರ್ವಾಂಗೀಣ ಪ್ರದರ್ಶನ ನೀಡಿ ಟ್ರೋಫಿ ಗೆದ್ದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಅರ್ಜುನ ಪ್ರಶಸ್ತಿ ವಿಜೇತೆ, ಅಂತಾರಾಷ್ಟ್ರೀಯ ಜಾವೆಲಿನ್ ಎಸೆತಗಾರ್ತಿ ಹಾಗೂ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನ್ನು ರಾಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಿರೂಪಕಿ ಶಮೀರಾ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು.
ಪಂದ್ಯಾವಳಿಯ ಅಂಗವಾಗಿ ನಾಲ್ಕು ವಿಶೇಷ ಪ್ರದರ್ಶನ ಪಂದ್ಯಗಳನ್ನೂ ಆಯೋಜಿಸಲಾಗಿತ್ತು. ಮಹಿಳಾ ಪ್ರದರ್ಶನ ಪಂದ್ಯಕ್ಕೆ ಕತಾರ್ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಆಯೇಷಾ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.

ವೈಯಕ್ತಿಕ ಪ್ರಶಸ್ತಿ ವಿಜೇತರು:
- ಫೈನಲ್ ಪಂದ್ಯಶ್ರೇಷ್ಠ: ಜಾವದ್ (ಮರ್ಬು)
- ಉತ್ತಮ ಬ್ಯಾಟ್ಸ್ಮನ್: ಸುಲ್ಫಾನ್ (ಮರ್ಬು)
- ಉತ್ತಮ ಬೌಲರ್: ಬಿಪಿನ್ ಕುಮಾರ್ (ಮರ್ಬು)
- ಉತ್ತಮ ಕ್ಷೇತ್ರರಕ್ಷಕ: ಜಾವದ್ (ಮರ್ಬು)
- ಉತ್ತಮ ವಿಕೆಟ್ ಕೀಪರ್: ನಾಸರ್ ಮಂಜೇಶ್ವರ (ಅಲಯನ್ಸ್ ಕತಾರ್)
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ವಿಜೇತ ಮರ್ಬು ತಂಡ, ರನ್ನರ್-ಅಪ್ ಹನಾನ್ ಸಿಸಿ ಹಾಗೂ ಭಾಗವಹಿಸಿದ ಎಲ್ಲ ತಂಡಗಳನ್ನು ಅಭಿನಂದಿಸಿದರು. ಕೆಎಸ್ಕ್ಯೂ ಸಲಹೆಗಾರ ಮತ್ತು ಪಂದ್ಯಾವಳಿ ನಿರ್ದೇಶಕ ಡಾ. ಸಂಜಯ್ ಕುದರಿ ಸೇರಿದಂತೆ ಸಂಘಟಕರ ಶ್ರಮವನ್ನು ಶ್ಲಾಘಿಸಲಾಯಿತು. ಸ್ವಯಂಸೇವಕರು, ತೀರ್ಪುಗಾರರು, ತಂಡಗಳು ಹಾಗೂ ಕ್ರೀಡಾಭಿಮಾನಿಗಳಿಗೆ ಧನ್ಯವಾದ ಸಲ್ಲಿಸುವುದರೊಂದಿಗೆ ಪಂದ್ಯಾವಳಿ ಮುಕ್ತಾಯಗೊಂಡಿತು.


Comments (0)