IFFI ಮೆರವಣಿಗೆಯಲ್ಲಿ ಗೋವಾದ ಸಾಂಸ್ಕೃತಿಕ ವೈಭವ ಅನಾವರಣ
- by Suddi Loka
- November 26, 2026
- 7 Views
ಪಣಜಿ: 57ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಅಂಗವಾಗಿ ಬುಧವಾರ ಪಣಜಿಯಲ್ಲಿ ನಡೆದ ವರ್ಣರಂಜಿತ ಮೆರವಣಿಗೆ ಸಿನೆಮಾ ಮತ್ತು ಗೋವಾದ ಸಾಂಸ್ಕೃತಿಕ ಪರಂಪರೆಯನ್ನು ಒಟ್ಟುಗೂಡಿಸಿತು. ಸಾಂಪ್ರದಾಯಿಕ ಸ್ತಬ್ಧಚಿತ್ರಗಳು, ಜಾನಪದ ಪ್ರದರ್ಶನಗಳು ಹಾಗೂ ಸ್ಥಳೀಯ ಕರಕುಶಲ ಕಲೆಗಳು ಮೆರವಣಿಗೆಯ ಆಕರ್ಷಣೆಯಾಗಿದ್ದವು.
‘ಸಿನಿಮಾದ ಸಂತೋಷವನ್ನು ಆಚರಿಸುವುದು’ ಎಂಬ ವಿಷಯದಡಿ ನಡೆದ ಮೆರವಣಿಗೆ ಗೋವಾ ಮನರಂಜನಾ ಸೊಸೈಟಿ (ESG) ಆವರಣದಿಂದ ಆರಂಭವಾಗಿ ಕಲಾ ಅಕಾಡೆಮಿಯಲ್ಲಿ ಅಂತ್ಯಗೊಂಡಿತು. ಗೋವಾದ ಕಾರ್ನೀವಲ್ ಮತ್ತು ಶಿಗ್ಮೋ ಉತ್ಸವಗಳಲ್ಲಿ ಪ್ರಶಸ್ತಿ ಪಡೆದ ಸ್ತಬ್ಧಚಿತ್ರಗಳೊಂದಿಗೆ ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳು ಗಮನ ಸೆಳೆದವು.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮೆರವಣಿಗೆಗೆ ಚಾಲನೆ ನೀಡಿ, ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ಸಾಂಸ್ಕೃತಿಕ ಸಂಪ್ರದಾಯಗಳ ಸಂರಕ್ಷಣೆ, ಸ್ಥಳೀಯ ಪ್ರತಿಭೆಗಳ ಪ್ರೋತ್ಸಾಹ ಮತ್ತು ಸ್ವಾವಲಂಬನೆಗೆ ಒತ್ತು ನೀಡಿದರು. ಆಕಾಶ್ ಕಂಡಿಲ್ ಸ್ಪರ್ಧೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು.

ESG ಉಪಾಧ್ಯಕ್ಷೆ ಡೆಲಿಲಾ ಎಂ. ಲೋಬೊ ಮಾತನಾಡಿ, ಈ ವರ್ಷದ ನವಿಲು ವಿಷಯಾಧಾರಿತ ಸಾಂಪ್ರದಾಯಿಕ ಲ್ಯಾಂಟರ್ನ್ ತಯಾರಿಕೆ ಸ್ಪರ್ಧೆಗೆ 350ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದರು.
ಕಾರ್ಯಕ್ರಮದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, NFDC ಹಾಗೂ ESGಯ ಹಿರಿಯ ಅಧಿಕಾರಿಗಳು ಮತ್ತು ಚಲನಚಿತ್ರ ಕ್ಷೇತ್ರದ ಗಣ್ಯರಾದ ಅಸೀಮ್ ಬಜಾಜ್, ಆಶ್ಲೇ ಲೋಬೊ ಹಾಗೂ ಸೈನಿ ಎಸ್. ಜೋಹ್ರೇ ಭಾಗವಹಿಸಿದ್ದರು.


Comments (0)