₹15,000 ಕನಿಷ್ಠ ಗೌರವಧನಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಧರಣಿ: 7ನೇ ದಿನ ‘ಆಶಾ ಸರಪಳಿ’ ನಿರ್ಮಿಸಿ ವಿನೂತನ ಪ್ರತಿಭಟನೆ ಹೋರಾಟ

ಬೆಂಗಳೂರು: ಮಾಸಿಕ ಕನಿಷ್ಠ ಗೌರವಧನವನ್ನು ₹15,000ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಆರನೇ ದಿನವೂ ಮುಂದುವರಿದಿದೆ. ಸೋಮವಾರ ಹೋರಾಟ ಏಳನೇ ದಿನಕ್ಕೆ ಕಾಲಿಡಲಿದೆ.

AIUTUC ಸಂಯೋಜಿತ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಭಾನುವಾರ ವಿವಿಧ ಕ್ಷೇತ್ರಗಳ ಗಣ್ಯರು ಬೆಂಬಲ ವ್ಯಕ್ತಪಡಿಸಿದರು.

ನಟಿ ಕಾರುಣ್ಯ ರಾಮ್ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಆಶಾ ಕಾರ್ಯಕರ್ತೆಯರ ಬೇಡಿಕೆ ನ್ಯಾಯಯುತವಾಗಿದ್ದು, ಸರ್ಕಾರ ಅದನ್ನು ಈಡೇರಿಸಬೇಕು ಎಂದರು. “ನಿಮ್ಮ ಮನೆಯ ಮಗಳು, ತಂಗಿಯಾಗಿ ನಿಮ್ಮೊಂದಿಗಿರಲು ಬಂದಿದ್ದೇನೆ. ಬೇಡಿಕೆ ಈಡೇರುವವರೆಗೂ ನಿಮ್ಮ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತೇನೆ” ಎಂದು ಭರವಸೆ ನೀಡಿದರು. ಅಲ್ಲದೆ, ಹೋರಾಟಗಾರರಿಗೆ ಅಕ್ಕಿ, ಬಿಸ್ಕಿಟ್ ಮತ್ತು ನೀರಿನ ಬಾಟಲಿಗಳನ್ನು ಕೊಡುಗೆಯಾಗಿ ನೀಡಿದರು.

ತುಮಕೂರಿನ ಗಣಿಬಾಧಿತ ಪರಿಸರ ಹಾಗೂ ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿಯ ಇಂದಿರಮ್ಮ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಹಗಲಿರುಳು ದುಡಿಯುವ ಆಶಾ ಕಾರ್ಯಕರ್ತೆಯರಿಗೆ ಗೌರವಯುತ ಜೀವನ ನಡೆಸಲು ಅಗತ್ಯವಾದ ಗೌರವಧನ ದೊರೆಯುತ್ತಿಲ್ಲ. ಅವರ ಬೇಡಿಕೆಗಳು ನ್ಯಾಯಯುತವಾಗಿದ್ದು, ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದರು.

ರೈಟ್ ಟು ಎಜುಕೇಶನ್ (RTE) ಸಮಿತಿ ಸದಸ್ಯ ಯೋಗಾನಂದ, ಆರನೇ ದಿನವಾದರೂ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳದಿರುವುದು ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದರು. ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುವಂತೆ ಕರೆ ನೀಡಿದರು.

ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ ಅಧ್ಯಕ್ಷೆ ಜ್ಯೋತಿ ಅನಂತಸುಬ್ಬರಾವ್, ಮಹಿಳೆಯರ ಪರ ಎಂದು ಹೇಳುವ ಸರ್ಕಾರ ಆಶಾ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಶಾಸಕರ ವೇತನ ಹೆಚ್ಚಳಕ್ಕೆ ಹಣವಿರುವ ಸರ್ಕಾರಕ್ಕೆ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಹಣವಿಲ್ಲವೇ ಎಂದು ಪ್ರಶ್ನಿಸಿದರು.

ಎಐಟಿಯುಸಿ ರಾಜ್ಯ ಅಧ್ಯಕ್ಷ ಕಾ. ಬಾಬು ಮ್ಯಾಥ್ಯೂ ಮಾತನಾಡಿ, ದುಡಿಯುವವರಿಗೆ ಜೀವನ ನಿರ್ವಹಣೆಗೆ ಯೋಗ್ಯವಾದ ವೇತನ ನೀಡದೆ ಸರ್ಕಾರ ಅನ್ಯಾಯ ಮಾಡುತ್ತಿದೆ. ₹15,000 ಗೌರವಧನದ ಬೇಡಿಕೆ ನ್ಯಾಯಯುತವಾಗಿದ್ದು, ಅದನ್ನು ಈಡೇರಿಸುವವರೆಗೂ ಹೋರಾಟ ಕೈಬಿಡಬಾರದು ಎಂದರು.

“ಆಶಾ ಸರಪಳಿ” ನಿರ್ಮಿಸಿ ವಿನೂತನ ಪ್ರತಿಭಟನೆ:

7ನೇ ದಿನವಾದ ಸೋಮವಾರ ಆಶಾ ಅನಿರ್ದಿಷ್ಟ ಧರಣಿ ಅಂಗವಾಗಿ ಮಧ್ಯಾಹ್ನ 12 ಕ್ಕೆ ಫ್ರೀಡಂ ಪಾರ್ಕ್ ಸುತ್ತಲೂ ಮಾನವ ಸರಪಳಿ ಮಾದರಿಯಲ್ಲಿ “ಆಶಾ ಸರಪಳಿ” ನಿರ್ಮಿಸಿ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (AIUTUC) ರಾಜ್ಯ ಉಪಾಧ್ಯಕ್ಷರಾದ ರಮಾ ಟಿ.ಸಿ. ತಿಳಿಸಿದ್ದಾರೆ.

Related Articles

Comments (0)