ಮಿಮ್ಸ್ ಜಾಗದ ಒತ್ತುವರಿ ತೆರವಿಗೆ ಕ್ರಮ: ನಿವಾಸಿಗಳಿಗೆ ಪರ್ಯಾಯ ನಿವೇಶನ ನೀಡಲು ಸಚಿವರ ಸೂಚನೆ

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್)ಗೆ ಸೇರಿದ ಜಾಗದ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಒತ್ತುವರಿದಾರರಿಗೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಪರ್ಯಾಯ ನಿವೇಶನಗಳನ್ನು ಗುರುತಿಸಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಮಿಮ್ಸ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಂಸ್ಥೆಗೆ ಸೇರಿದ 39.33 ಎಕರೆ ಪೈಕಿ ಪ್ರಸ್ತುತ 25.08 ಎಕರೆ ಮಾತ್ರ ಮಿಮ್ಸ್ ವಶದಲ್ಲಿದೆ. ತಮಿಳು ಕಾಲೋನಿ ನಿವಾಸಿಗಳು 9.17 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ತಿಳಿಸಿದರು.

1956ರಿಂದ ಇಲ್ಲಿ ವಾಸಿಸುತ್ತಿರುವ ನಿವಾಸಿಗಳ ಸ್ಥಳಾಂತರಕ್ಕಾಗಿ ಚಿಕ್ಕಮಂಡ್ಯದಲ್ಲಿ ಸ್ಲಂ ಬೋರ್ಡ್ ವತಿಯಿಂದ 576 ಮನೆಗಳನ್ನು ನಿರ್ಮಿಸಿ ನಾಲ್ಕು ವರ್ಷ ಕಳೆದರೂ ಸ್ಥಳಾಂತರ ಸಾಧ್ಯವಾಗಿಲ್ಲ. ಮೂಲಸೌಕರ್ಯ ಕೊರತೆ ಮತ್ತು ನಗರದಿಂದ ದೂರವಿರುವುದು ಇದಕ್ಕೆ ಕಾರಣವೆಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಈ ಹಿನ್ನೆಲೆಯಲ್ಲಿ ಈಗಾಗಲೇ ನಿರ್ಮಿಸಿರುವ ಮನೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಕಾರ್ಯಯೋಜನೆ ರೂಪಿಸುವಂತೆ ಸಚಿವರು ಸೂಚಿಸಿದರು. ನಿವಾಸಿಗಳ ಬೇಡಿಕೆಯಂತೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಪರ್ಯಾಯ ನಿವೇಶನ ಗುರುತಿಸಿ ಹಂಚಿಕೆ ಮಾಡಬೇಕು. ಸ್ಥಳಾಂತರಕ್ಕೆ ಒಪ್ಪಿಗೆ ಪತ್ರ ಪಡೆದು, ಅವರು ತೆರಳಿದ ಬಳಿಕ ನಿರ್ಮಿಸಿರುವ ಮನೆಗಳ ನವೀಕರಣ ಕೈಗೊಳ್ಳಬೇಕು ಎಂದರು. ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ವಹಿಸುವಂತೆಯೂ ಸೂಚಿಸಿದರು.

ತಿಂಗಳೊಳಗೆ ಕ್ಯಾನ್ಸರ್ ಆಸ್ಪತ್ರೆ ಆರಂಭ

ಮಂಡ್ಯದಲ್ಲಿ ನಿರ್ಮಿಸಿರುವ ಕ್ಯಾನ್ಸರ್ ಆಸ್ಪತ್ರೆಯನ್ನು ತಿಂಗಳೊಳಗೆ ಆರಂಭಿಸಬೇಕು. ಮೊದಲ ಹಂತದಲ್ಲಿ 100 ಹಾಸಿಗೆಗಳೊಂದಿಗೆ ಸೇವೆ ಪ್ರಾರಂಭಿಸಿ, ನಂತರ 200 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವಂತೆ ಸಚಿವರು ಸೂಚಿಸಿದರು.

ಮಿಮ್ಸ್ ತುರ್ತು ಚಿಕಿತ್ಸಾ ವಿಭಾಗದ ಮೇಲ್ದರ್ಜೆಗೆ ₹7 ಕೋಟಿ ಯೋಜನೆ ಸಿದ್ಧವಾಗಿದೆ. ಟ್ರಾಮಾ ಸೆಂಟರ್ ಹಾಗೂ ತರಗತಿ ಕೊಠಡಿಗಳ ನಿರ್ಮಾಣಕ್ಕೂ ಯೋಜನೆ ರೂಪಿಸುವಂತೆ ತಿಳಿಸಿದರು. ಮೂಲಸೌಕರ್ಯ ಕಾಮಗಾರಿಗಳನ್ನು ಎರಡು ತಿಂಗಳೊಳಗೆ ಆರಂಭಿಸಿ, ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡುವಂತೆ ನಿರ್ದೇಶನ ನೀಡಿದರು.

ಮಂಡ್ಯದಲ್ಲಿ ಜಯದೇವ ಆಸ್ಪತ್ರೆ

ಮಂಡ್ಯ ನಗರದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣಕ್ಕೆ ಐದು ಎಕರೆ ಜಾಗ ನೀಡುವುದಾಗಿ ಚಲುವರಾಯಸ್ವಾಮಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಜಾಗ ದೊರೆತ ಕೂಡಲೇ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು. ಅಲ್ಲಿಯವರೆಗೆ ಮಿಮ್ಸ್ ಆವರಣದಲ್ಲಿ ಒಪಿಡಿ ಸೇವೆ ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು.

ಸಭೆಯಲ್ಲಿ ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ. ಕುಮಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Comments (0)