ತಮಿಳುನಾಡಿಗೆ ಕಾವೇರಿ ನೀರು; ನ್ಯಾಯಾಲಯದಲ್ಲಿ ಮೇಲ್ಮನವಿ: ಸಿಎಂ ಡಿ ಕೆ ಶಿವಕುಮಾರ್

ಚಿತ್ರದುರ್ಗ: “ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಶಿಫಾರಸಿನ ವಿರುದ್ಧ ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.

ಚಿತ್ರದುರ್ಗದ ಸಿರಿಗೆರೆ ಮಠದ ಹೆಲಿಪ್ಯಾಡ್ ಬಳಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜಲಾಶಯಗಳ ಸದ್ಯದ ವಾಸ್ತವ ಸ್ಥಿತಿಯನ್ನು ವಿವರಿಸಿದರು. “ನಮ್ಮಲ್ಲಿ ನೀರಿದ್ದರೆ ಮಾತ್ರ ನೆರೆ ರಾಜ್ಯಕ್ಕೆ ಬಿಡಲು ಸಾಧ್ಯ. ಆದರೆ ಸದ್ಯ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಸಂಪೂರ್ಣವಾಗಿ ನಿಂತುಹೋಗಿದ್ದು, ಜಲಾಶಯಗಳಿಗೆ ಒಳಹರಿವು ಕೂಡ ಸ್ಥಗಿತಗೊಂಡಿದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ನೀರು ಬಿಡುವಂತೆ ನಮ್ಮ ಮೇಲೆ ತೀವ್ರ ಒತ್ತಡವಿದೆ. ಜಲಾಶಯಗಳ ನೀರಿನ ಮಟ್ಟವನ್ನು ಮತ್ತೊಮ್ಮೆ ಪರಿಶೀಲಿಸಿ, ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕಾನೂನಾತ್ಮಕ ಹೆಜ್ಜೆ ಇಡಲಾಗುವುದು,” ಎಂದರು.

ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ:

“ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಅನ್ನದಾತರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಯಾವ ರೀತಿಯಲ್ಲಿ ತುರ್ತು ನೆರವು ನೀಡಬೇಕು ಮತ್ತು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಗಬೇಕಾದ ಬರ ಪರಿಹಾರದ ಸಹಕಾರದ ಕುರಿತು ಈಗಾಗಲೇ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿಸ್ತೃತ ಚರ್ಚೆ ನಡೆದಿದೆ. ರಾಜ್ಯದ ರೈತರ ಹಿತ ಕಾಯಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ,” ಎಂದು ಅವರು ಭರವಸೆ ನೀಡಿದರು. ಇದೇ ವೇಳೆ, ಬರ ಪರಿಹಾರಕ್ಕಾಗಿ ದೆಹಲಿಗೆ ತೆರಳಲಿರುವ ಸರ್ವಪಕ್ಷ ನಿಯೋಗಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವ ವಿರೋಧ ಪಕ್ಷದ ನಾಯಕರಿಗೆ ಅವರು ಅಭಿನಂದನೆ ಸಲ್ಲಿಸಿದರು.

ಕಸ್ತೂರಿ ರಂಗನ್ ವರದಿ: ಒಮ್ಮತದ ತೀರ್ಮಾನ

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯ ಕುರಿತು ಮಾತನಾಡಿದ ಸಿಎಂ, “ಮಲೆನಾಡು ಮತ್ತು ಕರಾವಳಿ ಭಾಗದ ಜನರ ಹಾಗೂ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಣಯಕ್ಕೆ ಅಧಿವೇಶನದಲ್ಲಿ ವಿವಿಧ ಪಕ್ಷಗಳ ನಾಯಕರು ಒಮ್ಮತದ ಸಹಮತ ವ್ಯಕ್ತಪಡಿಸಿದ್ದಾರೆ. ರಾಜ್ಯದ ಜನತೆ ನಮ್ಮ ಸರ್ಕಾರ ಇಟ್ಟಿರುವ ನಂಬಿಕೆಯನ್ನು ಯಾವುದೇ ಕಾರಣಕ್ಕೂ ಹುಸಿಗೊಳಿಸದೆ ಜನಹಿತ ಕಾಯುವ ಜವಾಬ್ದಾರಿಯನ್ನು ನಾವು ಅಚ್ಚುಕಟ್ಟಾಗಿ ನಿರ್ವಹಿಸುತ್ತೇವೆ,” ಎಂದು ಸ್ಪಷ್ಟಪಡಿಸಿದರು

ಗ್ಯಾರಂಟಿ ಯೋಜನೆಗಳು ಬಡವರ ಪರವಾಗಿವೆ:

ಗ್ಯಾರಂಟಿ ಯೋಜನೆಗಳ ಪರಿಷ್ಕೃರಣೆ ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸಿ, ಸೌಲಭ್ಯಗಳನ್ನು ಬಡವರಿಗೆ ಮಾತ್ರ ನೀಡುವಂತೆ ಬಿಜೆಪಿ ಶಾಸಕ ಸುರೇಶ್ ಗೌಡ ಸೇರಿದಂತೆ ಕೆಲವು ವಿರೋಧ ಪಕ್ಷಗಳ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿವಿಧ ನಾಯಕರಿಗೆ ತಮ್ಮದೇ ಆದ ಅಭಿಪ್ರಾಯಗಳಿವೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಲವು ಕೇಂದ್ರ ಸಚಿವರು ಹಾಗೂ ನಾಯಕರು ಈ ಹಿಂದೆ ಹೇಳಿದ್ದರೂ, ರಾಜ್ಯ ಸರ್ಕಾರ ಮಾತ್ರ ಬಡವರ ಪರವಾಗಿ ನೆರವು ನೀಡುವ ಕಾರ್ಯವನ್ನು ಮುಂದುವರಿಸಲಿದೆ” ಎಂದರು.

ಕೆಪಿಎಸ್‌ಸಿ ಪರೀಕ್ಷೆ: ಅರ್ಹರಿಗೆ ನ್ಯಾಯ ಸಿಗಬೇಕು:

ಕೆಪಿಎಸ್ ಸಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ಕೆಪಿಎಸ್‌ಸಿ ವಿಚಾರದಲ್ಲಿಯೂ ಹಲವು ಹಿರಿಯ ನಾಯಕರು ತಮ್ಮ ಅಭಿಪ್ರಾಯಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.‌ ಉಗ್ರಪ್ಪ, ಬಿ ಎಲ್ ಶಂಕರ್, ಸುದರ್ಶನ್, ರಾಣಿ ಸತೀಶ್ ಸೇರಿದಂತೆ ಸುಮಾರು 20–30 ಮಂದಿ ನಾಯಕರು ಈ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಯನ್ನೂ ಗಮನಿಸಿದ್ದೇನೆ” ಎಂದು ಹೇಳಿದರು.

“ಕೆಪಿಎಸ್‌ಸಿ ನೇಮಕಾತಿ ಹಾಗೂ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕಾನೂನು ಚೌಕಟ್ಟನ್ನು ಪರಿಶೀಲಿಸಲಾಗುವುದು. ಪರೀಕ್ಷೆ ನಡೆಸುವ ಅಧಿಕಾರಿಗಳು ಹಾಗೂ ಸದಸ್ಯರು ಯಾವುದೇ ಒತ್ತಡಕ್ಕೆ ಒಳಗಾಗದೆ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದು ಮುಖ್ಯ. ಒತ್ತಡಗಳನ್ನು ಮೀರಿ ಸ್ಪರ್ಧಾತ್ಮಕವಾಗಿ ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸಿರುವವರಿಗೆ ನ್ಯಾಯ ಸಿಗಬೇಕು. ಪರೀಕ್ಷೆ ಮತ್ತು ಸಂದರ್ಶನವನ್ನು ಪರಿಶುದ್ಧವಾಗಿ ನಡೆಸುವುದು ಸಂಬಂಧಪಟ್ಟವರ ಜವಾಬ್ದಾರಿ. ಹಿಂದೆ ನಡೆದಿರುವ ಹಲವು ಘಟನೆಗಳ ಹಿನ್ನೆಲೆಯಲ್ಲಿ ಈ ಬಗ್ಗೆ ಕೆಲವರು ಸಲಹೆಗಳನ್ನು ನೀಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಎಲ್ಲವನ್ನೂ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಹೇಳಿದರು.

“ವಿಧಾನ ಪರಿಷತ್‌ ಚುನಾವಣೆ ಇರುವ ಕಾರಣಕ್ಕೆ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಹಿರಿಯೂರು ಹಾಗೂ ಚಿತ್ರದುರ್ಗ ಭಾಗದಲ್ಲಿ ನಡೆದಿರುವ ಭದ್ರಾ ಮೇಲ್ದಂಡೆ ಕಾಮಗಾರಿಗಳು ಮತ್ತು ನೀರು ಹರಿಸಿದ ಹಿನ್ನೆಲೆಯಲ್ಲಿ ರೈತರು ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದರು” ಎಂದರು.

Related Articles

Comments (0)

Leave a Comment