ಮಂಡ್ಯ ನಾಯಕರಿಗೆ ಮೈತ್ರಿ ಧರ್ಮ ಮನದಟ್ಟು: ಸಚಿವ ಡಿಕೆಶಿ ಸಭೆ ಯಶಸ್ವಿ

0
14680

ಬೆಂಗಳೂರು: ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅವರ ಸ್ಪರ್ಧೆ ವಿಚಾರವಾಗಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಭಾನುವಾರ ಕರೆದಿದ್ದ ಮಂಡ್ಯ ಕಾಂಗ್ರೆಸ್ ನಾಯಕರ ಸಭೆ ಯಶಸ್ವಿಯಾಗಿದ್ದು, ಸಭೆಯಲ್ಲಿ ಸಚಿವರ ಮಾತಿಗೆ ಮಂಡ್ಯ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸಂಜೆ ನಡೆದ ಸಭೆಯಲ್ಲಿ ಮಾತನಾಡಿದ ಸಚಿವ ಶಿವಕುಮಾರ್, ಪಕ್ಷದ ಕಾರ್ಯಕರ್ತರಾಗಿ ಹೈಕಮಾಂಡ್ ಸೂಚನೆಯನ್ನು ಪಾಲಿಸೋಣ ಎಂದು ಕಾಂಗ್ರೆಸ್ ಮುಖಂಡರಿಗೆ ಮನವರಿಕೆ ಮಾಡಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಣ ಮೈತ್ರಿ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲಾಗಿದೆ. ಹೀಗಾಗಿ ಅಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬುದು ಆ ಪಕ್ಷದ ನಾಯಕರ ತೀರ್ಮಾನವೇ ಅಂತಿಮ. ಅದರಲ್ಲಿ ನಾವು ತಲೆಹಾಕುವುದು ಬೇಡ. ಅದೇ ರೀತಿ ನಮ್ಮ ಕ್ಷೇತ್ರಗಳಲ್ಲಿ ಅಭ್ಯರ್ಥಿ ವಿಚಾರವಾಗಿ ಅವರು ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಮೈತ್ರಿ ಧರ್ಮದ ಪ್ರಕಾರ ಮಂಡ್ಯದಲ್ಲಿ ಜೆಡಿಎಸ್ ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುತ್ತದೆಯೋ ಅದಕ್ಕೆ ನಮ್ಮ ಬೆಂಬಲ ಇರಬೇಕು. ಅವರು ಸುಮಲತಾರನ್ನೇ ಅಭ್ಯರ್ಥಿ ಮಾಡಲಿ ಅಥವಾ ಬೇರೆಯವರನ್ನೇ ಕಣಕ್ಕಿಳಿಸಲಿ. ಅವರನ್ನು ನಾವು ಬೆಂಬಲಿಸಬೇಕು. ಹೈಕಮಾಂಡ್ ಕ್ಷೇತ್ರ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಅವರ ಅಭ್ಯರ್ಥಿ ಆಯ್ಕೆಯನ್ನು ನಾವು ಪ್ರಶ್ನಿಸುವಂತಿಲ್ಲ. ಇಲ್ಲಿ ಯಾವ ಪಕ್ಷಕ್ಕೆ ಅನುಕೂಲ ಅಥವಾ ಯಾವ ಪಕ್ಷಕ್ಕೆ ಅನಾನುಕೂಲ ಎಂದು ಚರ್ಚೆ ಅನಗತ್ಯ. ಹೀಗಾಗಿ ಹೈಕಮಾಂಡ್ ಸೂಚನೆಯಂತೆ ನಾವು ನಡೆಯೋಣ ಎಂದಿದ್ದಾರೆ.

ಸುಮಲತಾ ಅವರು ನಮ್ಮ ಮನೆಯ ಹೆಣ್ಣು ಮಗಳು. ಅವರ ಬಗ್ಗೆ ನನಗೆ ಬಹಳ ಗೌರವವಿದೆ. ಅಂಬರೀಶ್ ಕೂಡ ನನಗೆ ಆತ್ಮೀಯರಾಗಿದ್ದವರು. ಆ ಕುಟುಂಬದ ಜತೆ ಉತ್ತಮ ಸಂಬಂಧ ಹೊಂದಿದ್ದೇವೆ. ಅವರಿಗೆ ನಮ್ಮ ಭಾವನೆಯನ್ನು ತಿಳಿಸಿದ್ದೇವೆ. ಅವರೂ ತಮ್ಮ ಭಾವನೆಯನ್ನು ಹೇಳಿಕೊಂಡಿದ್ದಾರೆ. ಇಲ್ಲಿ ಯಾವುದೇ ಅಸಮಾಧಾನ, ವಿವಾದ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ವಿವರಿಸಿದರು.

ಸಚಿವರ ಮಾತಿಗೆ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಮಧು ಮಾದೇಗೌಡ, ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಎಲ್ಲ ನಾಯಕರು ಸಹಮತ ವ್ಯಕ್ತಪಡಿಸಿದರು.

- Call for authors -

LEAVE A REPLY

Please enter your comment!
Please enter your name here