ಸದನದಲ್ಲಿ‌ ಶ್ರೀರಾಮುಲು ವಿವಾದಿತ ಹೇಳಿಕೆ: ಕಡತದಿಂದ ಪದ ಕೈಬಿಟ್ಟು ವಿವಾದಕ್ಕೆ ತೆರೆ

0
51

ಫೈಲ್ ಫೋಟೋ:

ಬೆಂಗಳೂರು:ಉತ್ತರ ಕರ್ನಾಟಕದ ಕಡೆಗಣನೆಯನ್ನು ಖಂಡಿಸುವ ಆವೇಶದಲ್ಲಿ ಬಿಜೆಪಿ ಸದಸ್ಯ ಬಿ.ಶ್ರೀರಾಮುಲು ವಿವಾದಿತ ಹೇಳಿಕೆ ನೀಡಿದ್ದು, ಬಿಎಸ್ವೈ ಮನವಿ ಮೇರೆಗೆ ವಿವಾದಿತ ಹೇಳಿಕೆಯನ್ನು ಕಡತದಿಂದ ತೆಗೆಯುವ ಮೂಲಕ‌ ವಿವಾದಕ್ಕೆ ತೆರೆ ಎಳೆಯಲಾಯಿತು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲೇ ಬಿಜೆಪಿ ಸದಸ್ಯ ಹಾಗು ಮಾಜಿ ಸಚಿವ ಬಿ.ಶ್ರೀರಾಮುಲು ರಾಜ್ಯದ ಅಖಂಡತೆ ವಿರುದ್ಧ ಎನ್ನುವಂತಹ ಒಂದು ಹೋರಾಟವನ್ನು ಬೆಂಬಲಿಸುವ ಘೋಷಣೆ ಮಾಡಿದರು. ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದ್ದಕ್ಕಾಗಿ ಈ ನಿರ್ಧಾರ ಎಂದು ಶ್ರೀರಾಮುಲು ತಮ್ಮ ನಿಲುವನ್ನು ಸಮರ್ಥಿಸಿಕೊಂಡ್ರು.

ಜೆಡಿಎಸ್ ನ್ನು ಸೋಲಿಸಿದ ಕ್ಷೇತ್ರಗಳ ಮೇಲೆ ಸೇಡು ತೀರಿಸಿಕೊಳ್ಳಲು ಸಿಎಂ ಈ ಬಜೆಟ್ ಮೂಲಕ ಪ್ರಯತ್ನಿಸಿದ್ದಾರೆ. ಬಿಜೆಪಿ ಗೆದ್ದ ಕ್ಷೇತ್ರಗಳಿಗೆ ಸಮರ್ಪಕ ಯೋಜನೆ ಮತ್ತು ಅನುದಾನ ನೀಡದೆ ನಿರ್ಲಕ್ಷಿಸಿದ್ದಾರೆ. ಕೇವಲ ಅವರು ಅಣ್ಣತಮ್ಮಂದಿರು ಪ್ರತಿನಿಧಿಸುವ ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಬಜೆಟ್ ನಲ್ಲಿ ಅನುಕೂಲ ಮಾಡಿಕೊಡಲಾಗಿದೆ. ಮುಖ್ಯಮಂತ್ರಿಯವರ ಈ ಧೋರಣೆಯಿಂದ ಬೇಸತ್ತು ನಾವೂ ಸಹ ಹೋರಾಟವನ್ನು ಬೆಂಬಲಿಸುವ ಪರಿಸ್ಥಿತಿಗೆ ತಲುಪಿದ್ದೇವೆ ಎಂದ್ರು.

ಶ್ರೀರಾಮುಲು ಹೇಳಿಕೆಗೆ ಸಚಿವ ಶಿವಶಂಕರರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. ತಾರತಮ್ಯವಿದ್ದರೆ ಅದನ್ನು ಸರಿಪಡಿಸೋಣ. ಸಮಗ್ರ ಕರ್ನಾಟಕದ ಬಗ್ಗೆ ಮಾತನಾಡಿ ಎಂದು ಸಲಹೆ ನೀಡಿದ್ರು.

ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡುತ್ತಾ ಉತ್ತರ ಕರ್ನಾಟಕದ ಬಗ್ಗೆ ಈ ಭಾಗದ ನಾಯಕರ ಧೋರಣೆ ಬದಲಾಗಬೇಕು. ಉತ್ತರ ಕರ್ನಾಟಕದ ಜನ ಮಹಾರಾಷ್ಟ್ರಕ್ಕೆ ಗುಳೆ ಹೋಗಲಿ ಎಂಬ ಭಾವನೆ ಹೋಗಬೇಕು ಎಂದ್ರು.

ಸಮಗ್ರ ಕರ್ನಾಟಕದ ಬಗ್ಗೆ ನಾವೆಲ್ಲ ಒಂದೇ. ಆದರೆ ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯದಿಂದ ಆಕ್ರೋಶದಿಂದ ಶ್ರೀರಾಮುಲು ಆ ಮಾತು ಹೇಳಿದ್ದಾರೆ. ಹಾಗಾಗಿ ರಾಮುಲು ಹೇಳಿದ ಮಾತನ್ನು ಕಡತದಿಂದ ತೆಗೆಸುವಂತೆ‌ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಮನವಿ ಮಾಡಿದ್ರು.

ಯಡಿಯೂರಪ್ಪ ಮನವಿಯನ್ನು ಪುರಸ್ಕರಿಸಿದ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ರಾಮುಲು ಅವರ ವಿವಾದಿತ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಿದರು.

- Call for authors -

LEAVE A REPLY

Please enter your comment!
Please enter your name here