ಸ್ವರ ಬ್ರಹ್ಮ ಎಸ್.ಪಿ. ಬಾಲಸುಬ್ರಮಣ್ಯಂಗೆ ಇಂದು 72 ನೇ ಹುಟ್ಟು ಹಬ್ಬದ ಸಂಭ್ರಮ. 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಗಾನ ಕೋಗಿಲೆಗೆ ಇಂದು ಅಭಿಮಾನಿಗಳೂ ತುಂಬು ಹೃದಯದಿಂದ ಶುಭ ಹಾರೈಸಿದ್ದಾರೆ.
1946ರ ಜೂನ್ 4 ರಂದು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಜನ್ಮ ತಾಳಿದ ಎಸ್ಪಿಬಿ, ಬಾಲ್ಯದಿಂದಲೇ ಸಂಗೀತ ಲೋಕಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡವರು. ಓದಿದ್ದು ಇಂಜಿನಿಯರಿಂಗ್. ಆದ್ರೂ ಬದುಕು ಕಟ್ಟಿಕೊಂಡಿದ್ದು ಮಾತ್ರ ಸಂಗೀತ ಕ್ಷೇತ್ರದಲ್ಲಿ. ಶಾಲಾ ಕಾಲೇಜು ದಿನಗಳಿಂದಲೇ ಸಂಗೀತ ಸ್ಪರ್ಧೆಗಳಲ್ಲಿ ಹಾಡಿ ಗಮನ ಸೆಳೆದಿದ್ದ ಎಸ್ಪಿಬಿ 1964ರಲ್ಲಿ ಮೊದಲ ಬಾರಿಗೆ ತಮ್ಮ ಹಾಡಿಗೆ ಪ್ರಶಸ್ತಿ ಪಡೆದುಕೊಂಡರು. ಆ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ.
ಆರು ರಾಷ್ಟ್ರೀಯ ಪ್ರಶಸ್ತಿ: ಎಸ್ಪಿಬಿ 16 ಭಾಷೆಗಳ ಜನರಿಗೆ ತಮ್ಮ ಸ್ವರ ಮಾಧುರ್ಯವನ್ನು ನೀಡಿದ್ದಾರೆ. ಅದರಲ್ಲೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳ ಹಾಡಿಗೆ ಆರು ಬಾರಿ ರಾಷ್ಟ್ರೀಯ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ. ಇನ್ನು ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಪ್ರತಿಷ್ಠಿತ ಪ್ರಶಸ್ತಿಗಳು ಎಸ್ಪಿಬಿ ಅವರ ಮುಡಿಗೇರಿವೆ. ಅಷ್ಟೇ ಅಲ್ಲ, ಬಾಲಿವುಡ್ ಫಿಲ್ಮ್ಫೇರ್ ಪ್ರಶಸ್ತಿ ಸೇರಿದಂತೆ ದಕ್ಷಿಣ ಭಾರತದ ಒಟ್ಟು ಆರು ಫಿಲ್ಮ್ ಫೇರ್ ಪ್ರಶಸ್ತಿಗಳು ಎಸ್ಪಿಬಿ ಪಾಲಾಗಿವೆ.
ಎಸ್.ಪಿ. ಬಾಲಸುಬ್ರಮಣ್ಯಂ ಅವರ ಸಾಧನೆಯನ್ನು ಪರಿಗಣಿಸಿದ ಭಾರತ ಸರ್ಕಾರ 2001ರಲ್ಲಿ ಪದ್ಮಶ್ರೀ ಹಾಗೂ 2011ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
1966ರಲ್ಲಿ ಶ್ರೀ ಶ್ರೀ ಶ್ರೀ ಮರ್ಯಾದ ರಾಮಣ್ಣ ಚಿತ್ರದ ಹಾಡಿನ ಮೂಲಕ ಸಿನಿ ಲೋಕಕ್ಕೆ ಎಂಟ್ರಿ ಪಡೆದ ಎಸ್ಪಿಬಿ ಅಲ್ಪ ಕಾಲದಲ್ಲೇ ಜನಪ್ರಿಯ ಹಾಡುಗಾರನಾಗಿ ಹೊರಹೊಮ್ಮಿದ್ದರು. ತೆಲುಗು, ತಮಿಳು ಚಿತ್ರರಂಗದಲ್ಲಿ ತನ್ನ ಕಂಠದಿಂದ ಸಂಗೀತ ಪ್ರೇಮಿಗಳ ಮನ ಸೆಳೆದರು. ಅದ್ರಲ್ಲೂ ಇಳೆಯರಾಜ ಕಾಂಬಿಷೇನ್ನಲ್ಲಿ ಎಸ್ಪಿಬಿ ಯಶಸ್ಸಿನ ಉತ್ತುಂಗಕ್ಕೇರಿದರು. ದಕ್ಷಿಣ ಭಾರತದ ಘಟಾನುಘಟಿ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದ ಎಸ್ಪಿಬಿ ಕನ್ನಡ ಚಿತ್ರರಂಗದಲ್ಲೂ ಹೆಸರುವಾಸಿಯಾದರು. ಹಂಸಲೇಖಾ ಅವರ ಜೊತೆ ಪ್ರೇಮಲೋಕ ಚಿತ್ರದ ಹಾಡಿನ ಮೂಲಕ ಕನ್ನಡ ಸಿನಿ ರಸಿಕರ ಮನಸ್ಸನ್ನು ಕದ್ದುಬಿಟ್ಟರು. ಇನ್ನು ಬಾಲಿವುಡ್ನಲ್ಲಿ ಮೈನೆ ಪ್ಯಾರ್ ಕಿಯಾ ಚಿತ್ರದ ಹಾಡಿಗೂ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದರು.
ಹಾಗಂತ ಎಸ್ಪಿಬಿ ಕೇವಲ ಗಾಯನದಲ್ಲಿ ಮಾತ್ರ ಹೆಸರು ಮಾಡಿಲ್ಲ. ಜೊತೆಗೆ ಕೆಲವು ಚಿತ್ರಗಳಲ್ಲಿ ನಟನೆ ಮಾಡಿ ಕೂಡ ಗಮನ ಸೆಳೆದಿದ್ದರು. ಎದೆ ತುಂಬಿ ಹಾಡುವೆನು ಎಂಬ ಕನ್ನಡ ಖಾಸಗಿ ಚಾನೆಲ್ನ ಜನಪ್ರಿಯ ಕಾರ್ಯಕ್ರಮದ ಮೂಲಕ ಅನೇಕ ಯುವ ಹಾಡುಗಾರರಿಗೂ ದಾರಿ ದೀಪವಾದರು.
ಅಚ್ಚರಿ ಅಂದ್ರೆ ಕನ್ನಡದಲ್ಲಿ ವಿಷ್ಣು ವರ್ಧನ್ ಚಿತ್ರದ ಬಹುತೇಕ ಹಾಡುಗಳಿಗೆ ಸ್ವರ ನೀಡಿದ್ದರು. ಮತ್ತೊಂದೆಡೆ, ದೇಶ ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿರುವ ಎಸ್ಪಿಬಿ ಗಿನ್ನೇಸ್ ದಾಖಲೆ ಕೂಡ ಬರೆದಿದ್ದಾರೆ. ಒಟ್ಟಿನಲ್ಲಿ 72ರ ಹರೆಯದಲ್ಲೂ ಸಂಗೀತವನ್ನೇ ಉಸಿರು ಅಂತ ಆರಾಧಿಸುತ್ತಾ ಬಂದಿರುವ ಎಸ್ಪಿಬಿಗೆ ನಮ್ಮ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯ.