ಯಡಿಯೂರಪ್ಪ, ವಿಜಯೇಂದ್ರ ಆಪ್ತರ ಮೇಲೆ ಐಟಿ ದಾಳಿ ಸಿದ್ದರಾಮಯ್ಯ ಮೂಲ ಕಾರಣ:ಎಚ್.ಡಿ.ಕುಮಾರಸ್ವಾಮಿ

0
4

ಮೈಸೂರು: ಬಿಜೆಪಿಯನ್ನು ದುರ್ಬಲಗೊಳಿಸುವ ಒಳ ಉದ್ದೇಶದಿಂದ ಮಧ್ಯರಾತ್ರಿ ವೇಳೆಯಲ್ಲಿ ಪರಸ್ಪರ ಭೇಟಿ ಮಾಡಿದ್ದ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರಿಗೆ ಚೆಕ್‌ʼಮೇಟ್ ಇಡುವ ಏಕೈಕ ಉದ್ದೇಶದಿಂದಲೇ ರಾಜ್ಯದಲ್ಲಿ ಆದಾಯ ತೆರಿಗೆ ದಾಳಿ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ಆಪ್ತರ ಮನೆಗಳ ಮೇಲೆ ನಡೆದ ದಾಳಿಗೂ ಸಿದ್ದರಾಮಯ್ಯ ಅವರೇ ಮೂಲ ಕಾರಣ ಎಂದು ನೇರವಾಗಿಯೇ ಅವರು ತಿಳಿಸಿದರು.

ಮೈಸೂರಿನಲ್ಲಿ ಇಂದು ಬೆಳಗ್ಗೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು; “ಆದಾಯ ತೆರಿಗೆ ದಾಳಿ ಏತಕ್ಕೆ ನಡೆದಿದೆ ಎಂಬುದು ಅಲ್ಪಸ್ವಲ್ಪ ರಾಜಕೀಯ ಪ್ರಜ್ಞೆ ಇರುವವರಿಗೂ ಅರ್ಥವಾಗುತ್ತದೆ. ಯಡಿಯೂರಪ್ಪ ವೇಗಕ್ಕೆ ಬ್ರೇಕ್ ಹಾಕುವ ಏಕೈಕ ಉದ್ದೇಶದಿಂದಲೇ ಅವರೂ ಮತ್ತವರ ಪುತ್ರನ ಆಪ್ತರ ಮನೆಗಳ ಮೇಲೆ ಮೇಲಿನವರು (ಬಿಜೆಪಿ ವರಿಷ್ಠರು) ದಾಳಿ ಮಾಡಿಸಿದ್ದಾರೆ” ಎಂದರು.

ಯಾವ ಉದ್ದೇಶಕ್ಕೆ ಆದಾಯ ತೆರಿಗೆ ದಾಳಿ ನಡೆಯಿತು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇಬ್ಬರು ಮಾಜಿ ಮುಖ್ಯಮಂತ್ರಿಗಳು ರಹಸ್ಯ ಸ್ಥಳದಲ್ಲಿ ಭೇಟಿಯಾಗಿದ್ದರು ಎಂಬ ಸುದ್ದಿಯನ್ನು ಇಂದು ಬೆಳಗ್ಗೆ ನಾನೂ ಸಹ ಮೈಸೂರು ಪತ್ರಿಕೆಯೊಂದರಲ್ಲಿ ಗಮನಿಸಿದ್ದೇನೆ. ಅವರಿಬ್ಬರ ನಡುವೆ ಏನೇನು ಗಹನ ಚರ್ಚೆ ನಡೆದಿದೆ ಎಂಬ ಅಂಶವನ್ನು ಆ ವರದಿಯಲ್ಲಿ ಬರೆಯಲಾಗಿದೆ. ಈ ವಿಷಯ ಗೊತ್ತಾಗಿಯೇ ದಾಳಿ ಮಾಡಿಸಿರಬಹುದು ಎಂದರು ಅವರು.

ಯಡಿಯೂರಪ್ಪ ಅವರನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಬೇಕು ಎಂಬ ಉದ್ದೇಶದಿಂದ ಐಟಿ ದಾಳಿ ನಡೆದಿದೆ ಎಂದು ನಾನೊಬ್ಬನೇ ಹೇಳಿದ್ದು. ಅದನ್ನು ಮತ್ತೆ ಹೇಳಲು ನನಗೇನೂ ಹಿಂಜರಿಕೆ ಇಲ್ಲ. ಕೇಂದ್ರ ಸರಕಾರಕ್ಕೂ ಎಲ್ಲ ಮಾಹಿತಿ ಇರುತ್ತದೆ. ರಾಜ್ಯದಲ್ಲೂ ಅವರದ್ದೇ ಸರಕಾರ ಇದೆ. ಇಲ್ಲೇನು ನಡೆಯುತ್ತಿದೆ ಎಂಬುದು ಅವರಿಗೂ ತಿಳಿಯುತ್ತಿದೆ. ಇವರ ಆಟಗಳನ್ನು ನೋಡಿ ಎಲ್ಲೆಲ್ಲಿ ಬಿಗಿ ಮಾಡಬೇಕು ಎಲ್ಲೆಲ್ಲ ಬಿಗಿ ಮಾಡಿದ್ದಾರಷ್ಟೇ ಎಂದು ಹೆಚ್‌ಡಿಕೆ ಮಾರ್ಮಿಕವಾಗಿ ಹೇಳಿದರು.

ಅಧಿಕಾರಕ್ಕಾಗಿ ಸಿದ್ದರಾಮಯ್ಯ ಏನ್ ಬೇಕಾದ್ರೂ ಮಾಡ್ರಾರೆ?:

ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ನಡೆಯಬಹುದು. ಯಾರು ಯಾರ ಜತೆಗೆ ಬೇಕಾದೂ ಕೈ ಜೋಡಿಸಬಹುದು. ಸಿದ್ದರಾಮಯ್ಯ ಅವರಿಗೆ ಬೇಕಾದದ್ದು ಅಧಿಕಾರ ಮಾತ್ರ. ಅಧಿಕಾರ ಸಿಗುತ್ತದೆ ಎಂದಾದರೆ ಎಲ್ಲಿಗೆ ಬೇಕಾದರೂ ಹೋಗುತ್ತಾರೆ ಅವರು. ನಮ್ಮ ಪಕ್ಷದಲ್ಲಿ ಪವರ್ ಸಿಗಲ್ಲ, ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಅಂದಾಕ್ಷಣ ಕಾಂಗ್ರೆಸ್ ಪಕ್ಷಕ್ಕೆ ಹೋಗಲಿಲ್ಲವೇ? ಎಂದು ಕುಮಾರಸ್ವಾಮಿ ಅವರು ಪ್ರತಿಪಕ್ಷ ನಾಯಕನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

23 ಮಂತ್ರಿಗಳನ್ನು ಬೀದಿಯಲ್ಲಿ ನಿಲ್ಲಿಸಿದರು:

ಕೇವಲ ಒಂದು ವಿರೋಧ ಪಕ್ಷದ ಸ್ಥಾನಕ್ಕಾಗಿ ಅವರದ್ದೇ ಪಕ್ಷದ 23 ಮಂತ್ರಿಗಳನ್ನು ಬೀದಿಯಲ್ಲಿ ನಿಲ್ಲಿಸಿದವರು ಸಿದ್ದರಾಮಯ್ಯ. ಕಳೆದ ಎರಡು ವರ್ಷದಿಂದ ವಿರೋಧ ಪಕ್ಷದ ನಾಯಕನಾಗಬೇಕು, ಗೂಟದ ಕಾರಿನಲ್ಲಿ ಕೂತು ತಿರುಗಾಡಬೇಕು ಅನ್ನುವ ದುರಾಸೆಯಿಂದ ಅಷ್ಟೂ ಮಂತ್ರಿಗಳ ರಾಜಕೀಯ ಜೀವನ ಹಾಳು ಮಾಡಿದರು. ತಮ್ಮ ಸ್ವಾರ್ಥ ರಾಜಕಾರಣದಿಂದ ಅವರೆಲ್ಲರ ಭವಿಷ್ಯಕ್ಕೆ ಕೊಳ್ಳಿ ಇಟ್ಟರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಸಿದ್ದರಾಮಯ್ಯ ಅವರ ಪಾತ್ರವೇನು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಒಳಗೆ ಇಷ್ಟೆಲ್ಲ ಮಾಡಿ ಹೊರಗೆ ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಮ್ ಎನ್ನಲಿಕ್ಕೆ ಅವರಿಗೆ ನಾಚಿಕೆಯಾಗುವುದಿಲ್ಲವೇ? ಎಂದು ಹೆಚ್‌ಡಿಕೆ ಕಟುವಾಗಿ ಪ್ರಶ್ನಿಸಿದರು.

ಇವತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಬರಲು ಕಾರಣ ಯಾರು? ಅದಕ್ಕೆ ಕೊಡುಗೆ ಕೊಟ್ಟವರು ಯಾರು? ನೀವೇ ತಾನೆ? ಅಲ್ಪಸಂಖ್ಯಾತರಿಗೆ ಇದೆಲ್ಲ ಚೆನ್ನಾಗಿ ಅರ್ಥವಾಗಿದೆ ಎಂದು ಸಿದ್ದರಾಮಯ್ಯ ಅವರಿಗೆ ನೇರವಾಗಿ ಪ್ರಶ್ನೆ ಮಾಡಿದರಲ್ಲದೆ, ಇನ್ನಾದರೂ ಕೀಳು ರಾಜಕೀಯ ಮಾಡುವುದನ್ನು ಬಿಡಿ ಎಂದು ತಾಕೀತು ಮಾಡಿದರು.

ಚಾಮುಂಡೇಶ್ವರಿಯಲ್ಲಿ ಸೋತಿದ್ದು ಯಾಕೆ?:

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದಕ್ಕಾಗಿ ಅದೇ ಮಂಡ್ಯದಲ್ಲಿ ಬೆನ್ತಟ್ಟಿಕೊಂಡ ಇದೇ ಮೈಸೂರಿನ ಮಹಾನ್ ನಾಯಕರು (ಸಿದ್ದರಾಮಯ್ಯ), ತಮ್ಮ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತಿದ್ದು ಯಾಕೆ? ಯಾರಿಂದ ಸೋತರು ಎಂಬುದು ಗೊತ್ತಿಲ್ಲವೇ? ಹಾಲಿ ಮುಖ್ಯಮಂತ್ರಿ ಆಗಿದ್ದವರು 36,000 ಮತಗಳ ಅಂತರದಲ್ಲಿ ಸೋತರೂ ಅಂದರೆ ನನ್ನದೂ ಸ್ವಲ್ಪ ಪಾತ್ರ ಇರಬೇಕಲ್ವಾ? ಇದರಲ್ಲಿ ಮುಚ್ಚುಮರೆ ಇಲ್ಲ, ನಾನು ನೇರವಾಗಿಯೇ ಹೇಳಿದ್ದೇನೆ. ಇವರು ಕಳೆದ ಚುನಾವಣೆಯಲ್ಲಿ 130ರಿಂದ 78ಕ್ಕೆ ಯಾಕೆ ಬಂದರು? ಒಮ್ಮೆ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಲಿ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಇದರಿಂದಲಾದರೂ ಆ ಮಹಾನ್ ನಾಯಕರು ಪಾಠ ಕಲಿಯಬೇಕು. ಯಾರ ಬಗ್ಗೆಯಾದರೂ ಮಾತನಾಡಬೇಕಾದರೆ ಲಘುವಾಗಿ ಮಾತನಾಡಬಾರದು. ರಾಜಕೀಯ ಎಂದ ಮೇಲೆ ಏಳುಬೀಳು ಎಲ್ಲರಿಗೂ ಇದ್ದದ್ದೇ. ಅದು ಬಿಟ್ಟು ಮತ್ತೊಬ್ಬರ ಬಗ್ಗೆ ಕೀಳಾಗಿ ಮಾತನಾಡಬಾರದು ಎಂದ ಅವರು; ಮಂಡ್ಯದಲ್ಲಿ ನಿಖಿಲ್ ಯಾಕೆ ಸೋತರು? ಎಂದು ನಾನು ಈಗಾಗಲೇ ಹೇಳಿದ್ದೇನೆ. ರೈತಸಂಘ, ಕಾಂಗ್ರೆಸ್, ಬಿಜೆಪಿ, ಕೆಲ ಮಾಧ್ಯಮಗಳು ಸೇರಿ ʼಮ್ಯಾನೇಜ್ʼ ಮಾಡಿದ ಚುನಾವಣೆ ಅದು. ಕೌರವರು ಮಹಾಭಾರತದಲ್ಲಿ ರಚಿಸಿದ್ದ ಚಕ್ರವ್ಯೂಹದಲ್ಲಿ ಅಭಿಮನ್ಯು ಹೇಗೆ ಸಿಲುಕಿದ್ದನೋ ಹಾಗೇ ಇವರೆಲ್ಲರ ಷಡ್ಯಂತ್ರದ ಚಕ್ರವ್ಯೂಹದಲ್ಲಿ ನಿಖಿಲ್ ಸಿಲುಕಿದ್ದರು ಎಂದು ನಾನು ಹೇಳಿದ್ದೇನೆ. ಈ ವಿಷಯ ಮಂಡ್ಯ ಜನತೆಗೆ ಗೊತ್ತಿದೆ ಎಂದು ಅವರು ಹೇಳಿದರು.

ರಾಜಕೀಯವಾಗಿ ಬೆಳೆದು ಬಂದ ನಮ್ಮ ಪಕ್ಷದ ಬಗ್ಗೆ ಮಾತನಾಡಬೇಡಿ ಎಂದು ಪದೇಪದೆ ಎಚ್ಚರಿಕೆ ನೀಡುತ್ತಿದ್ದರೂ ನಮ್ಮನ್ನು ಕೆಣಕುತ್ತಲೇ ಇದ್ದಾರೆ. ನಾವು ಉತ್ತರ ಕೊಡದೇ ಸುಮ್ಮನೆ ಇರಲಾದೀತೆ? ಅವರಿಗೆ ನಮ್ಮ ಬಗ್ಗೆ ಮಾತನಾಡಿದ್ದರೆ ತಿಂದ ಅನ್ನ ಜೀರ್ಣ ಆಗಲ್ಲ ಎಂದು ಹೆಚ್‌ಡಿಕೆ ಟೀಕಿಸಿದರು.

ಸಿದ್ದರಾಮಯ್ಯಗೆ ಪಾಠ ಕಲಿಸಲೆಂದೇ ಮುಸ್ಲಿಮರಿಗೆ ಟಿಕೆಟ್:

ಸಿಂಧಗಿ ಉಪ ಚುನಾವಣೆಯಲ್ಲಿ ಪೈಪೋಟಿ ಇರುವುದು ಬಿಜೆಪಿ-ಜೆಡಿಎಸ್ ನಡುವೆ ಮಾತ್ರ. ಕಾಂಗ್ರೆಸ್ ಪಕ್ಷಕ್ಕೆ ಅಲ್ಲಿ ನೆಲೆಯೇ ಇಲ್ಲ. ಯಾವತ್ತೂ ಅಲ್ಲಿ ಆ ಪಕ್ಷ ಎರಡನೇ ಸ್ಥಾನಕ್ಕೂ ಬಂದಿಲ್ಲ. ಕಾಂಗ್ರೆಸ್ ಏನೇ ತಿಪ್ಪರಲಾಗ ಹಾಕಿದರೂ ಅಲ್ಲಿ ಗೆಲ್ಲೋದು ಜೆಡಿಎಸ್ ಪಕ್ಷವೇ. ಹಾನಗಲ್ ಕ್ಷೇತ್ರದಲ್ಲಿಯೂ ನಮಗೆ ಉತ್ತಮ ವಾತಾವರಣವಿದೆ. ನಾವು ಎಂ.ಟೆಕ್ ಪದವೀಧರನಿಗೆ ಟಿಕೆಟ್ ನೀಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲಿಕ್ಕೆ ನಾವು ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ. ಕಳೆದ ಬಾರಿ ಮೈಸೂರಿನ ಎನ್ ಆರ್ ಕ್ಷೇತ್ರದಲ್ಲೂ ಮುಸ್ಲಿಮ್ ಅಭ್ಯರ್ಥಿಗೆ ನಮ್ಮ ಪಕ್ಷ ಟಿಕೆಟ್ ನೀಡಿತ್ತು. ಟಿಕೆಟ್ ಕೊಡಲು ಈ ದೊಣ್ಣೆ ನಾಯಕನ ಅಪ್ಪಣೆ ಬೇಕಾ ನಮಗೆ? ನಾನು ಯಾರಿಗೆ ಬೇಕಾದರೂ ಟಿಕೆಟ್ ಕೊಡ್ತೇನೆ? ಕೇಳೋಕೆ ಇವರು ಯಾರು? ಬೇಕಾದರೆ ಅಲ್ಪಸಂಖ್ಯಾತರಿಗೆ ಅವರೂ ಟಿಕೆಟ್ ಕೊಡಬೇಕಿತ್ತು, ಬೇಡ ಎಂದವರು ಯಾರು? ಎಂದರು ಅವರು.

2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮಾಡಿದ್ದೇನು? ಎಷ್ಟೆಲ್ಲ ಕುತಂತ್ರ ಹೂಡಿದರು ಎಂಬುದು ನನಗೆ ಗೊತ್ತಿದೆ. ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಎಂದು ಅಪಪ್ರಚಾರ ಮಾಡಿದ್ದನ್ನು ನಾನು ಮರೆತಿಲ್ಲ. ಜೆಡಿಎಸ್ ಬಿಜೆಪಿ ಬಿ ಟೀಮ್, ಗೆದ್ದರೆ ಬಿಜೆಪಿ ಜತೆ ಹೋಗ್ತಾರೆ ಎಂದು ಇಲ್ಲಸಲ್ಲದ ಆರೋಪ ಮಾಡಿದ್ದರು. ಇವರ ಕುತಂತ್ರ ರಾಜಕಾರಣಕ್ಕೆ ಸಡ್ಡು ಹೊಡೆಯುವ ಉದ್ದೇಶದಿಂದಲೇ ನಾನು ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೇನೆ. ಸಿದ್ದರಾಮಯ್ಯನಿಗೆ ಪಾಠ ಕಲಿಸುವ ಉದ್ದೇಶದಿಂದಲೇ ಹೀಗೆ ಮಾಡಿದ್ದು, ಕಾಂಗ್ರೆಸ್ ಪಕ್ಷಕ್ಕಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ಜಿಲ್ಲಾ ಉಸ್ತುವಾರಿ ಜಗಳ ಒಳ್ಳೆಯದಲ್ಲ:
ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿಗಾಗಿ ಸಚಿವರ ಮಧ್ಯೆ ನಡೆದಿರುವ ಪೈಪೋಟಿ ಒಳ್ಳೆಯದಲ್ಲ ಎಂದು ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಅವಕಾಶ ಸಿಕ್ಕಿರುವುದು ಜನರ ಕೆಲಸ ಮಾಡಲಿಕ್ಕೇ ಹೊರತು ಪರಸ್ಪರ ಕಿತ್ತಾಡಿಕೊಳ್ಳುವುದಕ್ಕಲ್ಲ. ಉಸ್ತುವಾರಿ ಸಿಗದಿದ್ದರೂ ಉತ್ತಮವಾಗಿ ಕೆಲಸ ಮಾಡಿ ತೋರಿಸಬಹುದು ಎಂದು ಎಂದು ಅವರು ಹೇಳಿದರು.

 

- Call for authors -

LEAVE A REPLY

Please enter your comment!
Please enter your name here