ಪ್ಯಾರಿಸ್ ಒಲಂಪಿಕ್ಸ್‌ಗೆ ಕಳುಹಿಸಲು ಅಮೃತ ಕ್ರೀಡಾ ದತ್ತು ಯೋಜನೆಯಡಿಯಲ್ಲಿ 75 ಕ್ರೀಡಾಪಟುಗಳ ಆಯ್ಕೆ: ಸಚಿವ ಡಾ.ನಾರಾಯಣ ಗೌಡ

0
2

ಬೆಂಗಳೂರು: ಮುಖ್ಯಮಂತ್ರಿಗಳು ಸ್ವಾತಂತ್ರ್ಯ ಭಾಷಣದಲ್ಲಿ ಘೋಷಿಸಿದಂತೆ `ಅಮೃತ ಕ್ರೀಡಾ ದತ್ತು ಯೋಜನೆ’ ಗೆ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಮುಂದಿನ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿ ಹೆಚ್ಚಿನ ಪದಕ ಗೆಲ್ಲಲು ಅನುವಾಗುವ ನಿಟ್ಟಿನಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಮೃತ ಕ್ರೀಡಾದತ್ತು ಯೋಜನೆಯನ್ನು ಘೋಷಿಸಿದ್ದರು.

ಅದರಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣ ಗೌಡ ಅವರ ಅಧ್ಯಕ್ಷತೆಯ ಉನ್ನಾತಾಧಿಕಾರ ಸಮಿತಿಯು, ವಿಸ್ತೃತವಾಗಿ ಚರ್ಚಿಸಿ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಪ್ರತಿಭಾನ್ವಿತ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಿದೆ. ಜೊತೆಗೆ 20 ಕಾಯ್ದಿರಿಸಿದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಕೂಡ ಆಯ್ಕೆ ಮಾಡಲಾಗಿದೆ.

ಟೋಕಿಯೋ ಒಲಂಪಿಕ್, ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಸೇರಿದಂತೆ ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ 75 ಕ್ರೀಡಾಪಟುಗಳನ್ನು ಅಮೃತ ಕ್ರೀಡಾ ದತ್ತು ಯೋಜನೆಗೆ ಆಯ್ಕೆ ಮಾಡಲಾಗಿದೆ.

ಟೋಕಿಯೋ ಒಲಂಪಿಕ್‌ನಲ್ಲಿ ಭಾಗವಹಿಸಿದ್ದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಈಜುಪಟು ಶ್ರೀಹರಿ ನಟರಾಜ್, ಪ್ಯಾರಾ ಈಜುಪಟು ನಿರಂಜನ್, ಫೌದಾ ಮಿರ್ಜಾ, ಷಕೀನಾ ಖಾತೂನ್ ಸೇರಿದಂತೆ ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ 75 ಕ್ರೀಡಾಪಟುಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ.

ಅಮೃತ ಕ್ರೀಡಾದತ್ತು ಯೋಜನೆಯಲ್ಲಿ ವಾರ್ಷಿಕ ಐದು ಲಕ್ಷ ರೂಪಾಯಿ ನೀಡಲಾಗುತ್ತದೆ. ಅಗತ್ಯ ತರಬೇತಿ ಹಾಗೂ ಪ್ರೋತ್ಸಾಹ ನೀಡುವ ಮೂಲಕ ಮುಂದಿನ ಒಲಂಪಿಕ್‌ನಲ್ಲಿ ಹೆಚ್ಚಿನ ಪದಕಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕ್ರೀಡಾಪಟುಗಳನ್ನ ಸಜ್ಜುಗೊಳಿಸಲಾಗುತ್ತದೆ. ಇದರ ಜೊತೆಗೆ ಕ್ರೀಡಾಪಟುಗಳಿಗೆ ಮತ್ತಷ್ಟು ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಸಿಎಸ್‌ಆರ್ ಅಡಿಯಲ್ಲಿ ದತ್ತು ತೆಗೆದುಕೊಳ್ಳಲು 150ಕ್ಕೂ ಕಂಪನಿಗಳಿಗೆ ಪತ್ರ ಬರೆದು ಚರ್ಚಿಸಲಾಗಿದೆ. ಈಗಾಗಲೇ 50 ಕ್ಕೂ ಹೆಚ್ಚು ಕಂಪನಿಗಳು ಮುಂದೆ ಬಂದಿವೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣ ಗೌಡ ಅವರು ತಿಳಿಸಿದ್ದಾರೆ.

ನವೆಂಬರ್ ಮೊದಲನೇ ವಾರದಲ್ಲಿ ಮುಖ್ಯಮಂತ್ರಿಗಳು ಕ್ರೀಡಾದತ್ತು ಯೋಜನೆಯಲ್ಲಿ ಆಯ್ಕೆ ಆಗಿರುವ ಎಲ್ಲಾ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ವಿತರಿಸಲಿದ್ದಾರೆ ಎಂದು ಸಚಿವ ನಾರಾಯಣ ಗೌಡ ಅವರು ತಿಳಿಸಿದ್ದಾರೆ.

ಗಾಲ್ಫ್ – 1, ಸ್ವಿಮ್ಮಿಂಗ್ -5, ಅಥ್ಲೆಟಿಕ್ಸ್- 12, ಪ್ಯಾರಾ ಅಥ್ಲೆಟಿಕ್ಸ್- 3, ಸೈಕ್ಲಿಂಗ್- 8, ಬ್ಯಾಸ್ಕೆಟ್‌ಬಾಲ್‌- 7, ಕುಸ್ತಿ- 4, ಟೆನ್ನಿಸ್-3, ಟೇಬಲ್ ಟೆನ್ನಿಸ್-2, ಹಾಕಿ- 5, ಬ್ಯಾಡ್ಮಿಂಟನ್- 9 ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸುವ 75 ಪ್ರತಿಭಾವಂತ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ.

- Call for authors -

LEAVE A REPLY

Please enter your comment!
Please enter your name here