ಚಿಕ್ಕಬಳ್ಳಾಪುರ: ಬೆಂಗಳೂರಿನಿಂದ ಅತಿವೇಗದಲ್ಲಿ ಬರುತ್ತಿದ್ದ ಲಾರಿಯೊಂದು ಹಂಪ್ ನಿಂದ ಹಾರಿ ಕಾಂಡಿಮೆಂಟ್ಸ್ ಅಂಗಡಿಗೆ ನುಗ್ಗಿದ ಪರಿಣಾಮ ಟೀ ಕುಡಿಯುತ್ತಿದ್ದ ನಾಲ್ವರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೆ, ರಸ್ತೆ ಬದಿ ಇದ್ದ ಮೂರು ಕಾರುಗಳೂ ಜಖಂ ಆಗಿವೆ.
ರಾಷ್ಟ್ರೀಯ ಹೆದ್ದಾರಿ 7ರ ಚದುಲಪುರ ಗೇಟ್ ಬಳಿ ಕೃಷ್ಣ ಕಾಂಡಿಮೆಂಟ್ಸ್ ಮುಂದೆ ಟೀ ಕುಡಿಯುತ್ತಿದ್ದವರ ಮೇಲೆ ಯಮನಂತೆ ಬಂದೆರಗಿದ ಲಾರಿ ನಾಲ್ವರ ಪ್ರಾಣ ತೆಗೆದಿದೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಅಪಘಾತದಲ್ಲಿ ಬೆಂಗಳೂರು ಮೂಲದ ವಕೀಲ ಯಮುನಾಚಾರಿ, ಕಲಾಂಜಿಯಮ್, ದೊಡ್ಡಬಳ್ಳಾಪುರ ಮೂಲದ ನಿತೀಶ್ ಗೌಡ, ಚಿಕ್ಕಬಳ್ಳಾಪುರ ತಾಲ್ಲೂಕಿನ ಗವಿಗಾನಹಳ್ಳಿಯ ವೆಂಕಟೇಶ್ ಮೃತಪಟ್ಟಿದ್ದಾರೆ. ಇನ್ನೂ ರಸ್ತೆ ಬದಿ ನಿಂತಿದ್ದ ಎರಡು ಕಾರುಗಳಿಗೆ ಲಾರಿ ಡಿಕ್ಕಿ ಹೊಡೆದು ಕಾರುಗಳು ನಜ್ಜುಗುಜ್ಜಾಗಿವೆ.
ಘಟನೆಯ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ನಂದಿಗಿರಿಧಾಮ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.