ಶರಣರ ತಾಣಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಬಿ.ಎಸ್. ಯಡಿಯೂರಪ್ಪ

0
1

ಮೈಸೂರು,ಜನವರಿ.23: ಶರಣ-ಶರಣೆಯರ ಜನ್ಮ ತಾಣಗಳನ್ನು ದಾನಿಗಳ ಸಹಕಾರದೊಂದಿಗೆ ಅಭಿವೃದ್ಧಿಪಡಿಸುವ ಕೆಲಸವನ್ನು ಸರ್ಕಾರ ಪ್ರಾಮಾಣಿಕವಾಗಿ ಮಾಡುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಶನಿವಾರ ಮೈಸೂರಿನಲ್ಲಿ ಜೆ.ಪಿ.ನಗರ ಶರಣ ವೇದಿಕೆ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶಿವಶರಣೆ ಅಕ್ಕಮಹಾದೇವಿ ಅವರ 11 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.

ಅಕ್ಕಮಹಾದೇವಿಯವರ ಜನ್ಮಸ್ಥಳವಾದ ಶಿಕಾರಿಪುರ ತಾಲ್ಲೂಕಿನ ಉಡುತಡಿಯನ್ನು ಶ್ರದ್ಧಾಭಕ್ತಿಯ ಕೇಂದ್ರವನ್ನಾಗಿ ರೂಪಿಸಲು 30 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಈ ಕ್ಷೇತ್ರ ದೇಶದ ಗಮನ ಸೆಳೆಯುವ ಶ್ರದ್ಧಾ, ಭಕ್ತಿ ಕೇಂದ್ರ, ಪುಣ್ಯ ಕ್ಷೇತ್ರ ಆಗಲಿದೆ. ಬಸವೇಶ್ವರರ ಜನ್ಮಸ್ಥಳವಾದ ಬಸವಕಲ್ಯಾಣದಲ್ಲಿಯೂ ಭವ್ಯವಾದ ಸ್ಮಾರಕ ನಿರ್ಮಾಣವನ್ನು 500 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗುತ್ತಿದೆ ಎಂದರು.

ಅಕ್ಕಮಹಾದೇವಿಯವರು ವಚನ ಸಾಹಿತ್ಯದ ಪ್ರಮುಖರಲ್ಲಿ ಒಬ್ಬರು. ನೇರ ವ್ಯಕ್ತಿತ್ವ ಅವರದ್ದು. ಬೆಟ್ಟದಲ್ಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯ ಎಂದ ಅಕ್ಕ ಮಹಾವೇವಿ, ತಮ್ಮ ವಿಶಿಷ್ಟ ಸಂವೇದನೆಯ ಮೂಲಕ ಗಮನ ಸೆಳೆದಿದ್ದಾರೆ ಎಂದರು.

ಮನುಷ್ಯನ ಆತ್ಮಕಲ್ಯಾಣ, ಸಮುದಾಯದ ಕಲ್ಯಾಣ ಸಾಧಿಸಲು ಅಂತರಂಗ ಮತ್ತು ಬಹಿರಂಗ ಶುದ್ಧವಾಗಿರಬೇಕು ಎಂಬುದು ಅಕ್ಕನ ಆಶಯವಾಗಿತ್ತು. ಶರಣ ಸಂಕುಲದ ಅಪೇಕ್ಷೆ ಕೂಡ ಆಗಿತ್ತು. ಇಂತಹ ಸಾಕ್ಷಿ ಪ್ರಜ್ಞೆ ಇರಬೇಕು ಎಂದು ಹೇಳಿದರು.

ಈ ನಾಡಿನಲ್ಲಿ ಶರಣ-ಶರಣೆಯ ಅನೇಕ ಸ್ಥಳಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಿ, ಮುಂದಿನ ನೂರಾರು ವರ್ಷಗಳು ನಮ್ಮ ಯುವ ಪೀಳಿಗೆಯ ನೆನಪಿನಲ್ಲಿ ಉಳಿಯುವಂತೆ ಮಾಡುವುದು ಎಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ಸರ್ಕಾರದ ಪ್ರಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.

ಮಹಿಳಾ ಸಮಾನತೆ ಮತ್ತು ಸಬಲೀಕರಣವನ್ನು ಪ್ರತಿಪಾದಿಸಿದ ಅಕ್ಕಮಹಾದೇವಿಯವರು ಮಹಿಳೆಯರನ್ನು ಶೋಷಣೆಯಿಂದ ಮುಕ್ತಗೊಳಿಸಲು ತಮ್ಮ ವಚನಗಳ ಮೂಲಕ ತಳಪಾಯ ಹಾಕಿದರು. ಅಂಥವರ ಪ್ರತಿಮೆಯನ್ನು ಮೈಸೂರಿನ ಜೆ.ಪಿ.ನಗರ ಶರಣ ವೇದಿಕೆ ನಿರ್ಮಿಸಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್, ಸುತ್ತೂರು ಮಠದ ಶ್ರೀಗಳಾದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಜಿ.ಟಿ.ದೇವೇಗೌಡ, ತನ್ವಿರ್ ಸೇಠ್, ಎಲ್.ನಾಗೇಂದ್ರ, ವಿವಿಧ ಪ್ರಾಧಿಕಾರ, ನಿಗಮ-ಮಂಡಳಿಗಳ ಅಧ್ಯಕ್ಷರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

- Call for authors -

LEAVE A REPLY

Please enter your comment!
Please enter your name here