ಕೇಂದ್ರದಿಂದ ರೈತರಿಗೆ ಭರ್ಜರಿ ಗಿಫ್ಟ್: ಮುಂಗಾರಿನ 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ

0
42

ನವದೆಹಲಿ: ಲೋಕಸಭಾ ಚುನಾವಣೆಗೆ ಈಗಾಗಲೇ ಎಲ್ಲಾ ಪಕ್ಷಗಳು ತನ್ನದೇ ರೀತಿಯಲ್ಲಿ ತಯಾರಿ ನಡೆಸಿದ್ದು, ಕೇಂದ್ರದಲ್ಲಿ ಆಡಳಿತ ರೂಢ ಪಕ್ಷ ಮುಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ರೈತರಿಗೆ ಕೊಡಿಗೆ ನೀಡಿದೆ.

ಕೇಂದ್ರದ ಎನ್‌ಡಿಎ ಸರ್ಕಾರ ಮುಂಗಾರಿನ  14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದು, ಈ ಮೂಲಕ ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗೆಟ್ಟಿದ್ದ ರೈತರಿಗೆ ಸೂಕ್ತ ಬೆಲೆ ನೀಡಲು ಮುಂದಾಗಿದೆ.

ಇಂದು ನಡೆದ ಆರ್ಥಿಕ ವ್ಯವಹಾರಗಳ ಕೇಂದ್ರ ಸಂಪುಟ ಸಮಿತಿಯ ಸಭೆಯಲ್ಲಿ 14 ಮುಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.

ಸಿಸಿಇಎ ಸಭೆಯ ಬಳಿಕ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಮತ್ತು ಸಚಿವ ರವಿಶಂಕರ್‌ ಪ್ರಸಾದ್‌ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಬೆಂಬಲ ಬೆಲೆ ಹೆಚ್ಚಳದ ಬಗ್ಗೆ ಘೋಷಣೆ ಮಾಡಿದರು. ಅಲ್ಲದೆ, ಬೆಂಬಲ ಬೆಲೆ ಹೆಚ್ಚಳದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ  15,000 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ತಿಳಿಸಿದರು.

ಪ್ರತಿ ಕ್ವಿಂಟಲ್‌ ಭತ್ತಕ್ಕೆ ಶೇಕಡಾ12.9ರಷ್ಟು ಹೆಚ್ಚಳ ಮಾಡಲಾಗಿದ್ದು, 1550 ರೂಪಾಯಿ ಯಿಂದ 1750 ರೂಪಾಯಿಗೆ ಹೆಚ್ಚಾಗಿದೆ. ರಾಗಿಗೆ ಪ್ರತಿ ಕ್ವಿಂಟಲ್‌ಗೆ ಶೇಕಡಾ 50 ರಷ್ಟು ಬೆಂಬಲ ಬೆಲೆ ನೀಡಲಾಗಿದ್ದು, 1900 ರೂಪಾಯಿ ಯಿಂದ 2897 ರೂಪಾಯಿಗೆ ಹೆಚ್ಚಳವಾಗಿದೆ.

ಹೈಬ್ರಿಡ್‌ ಜೋಳಕ್ಕೆ  ಕ್ವಿಂಟಾಲ್‌ಗೆ  ಶೇಕಡಾ 40 ರಷ್ಟು ಹೆಚ್ಚಳ ಮಾಡಲಾಗಿದ್ದು, 1700 ರೂಪಾಯಿಂದ 2430 ರೂಪಾಯಿಗೆ ಹೆಚ್ಚಳವಾಗಿದೆ.

ಸೂರ್ಯಕಾಂತಿಗೆ ಕ್ವಿಂಟಾಲ್‌ಗೆ ಶೇಕಡಾ 31.4 ಹೆಚ್ಚಳ ಮಾಡಲಾಗಿದ್ದು, 4100 ರೂಪಾಯಿಂದ 5388 ರೂಪಾಯಿಗೆ ಬೆಲೆ ಹೆಚ್ಚಾಗಿದೆ.

ತೊಗರಿ 5450 ರೂಪಾಯಿಯಿಂದ 5675 ರೂಪಾಯಿಗೆ, ಉದ್ದು ಕ್ವಿಂಟಾಲ್‌ಗೆ 5,400 ರೂಪಾಯಿಯಿಂದ 5600 ರೂಪಾಯಿಗೆ, ಹೆಸರು ಬೇಳೆ ಕ್ವಿಂಟಾಲ್‌ಗೆ 5575 ರೂಪಾಯಿಂದ 6975 ರೂಪಾಯಿಗೆ ಬೆಲೆ ಹೆಚ್ಚಳವಾಗಿದೆ‌.

ಹತ್ತಿ (ಮದ್ಯಮ) 4020 ರೂಪಾಯಿಯಿಂದ 5150 ರೂಪಾಯಿಗೆ ಹೆಚ್ಚಳವಾಗಿದ್ದು, ಸೋಯಾಬೀನ್‌, ನೆಲಗಡಲೆ, ಮುಸುಕಿನ ಜೋಳ, ಎಳ್ಳಿಗೂ ಬೆಂಬಲ ಬೆಲೆ ಘೋಷಿಸಲಾಗಿದೆ. 2 ವಾರಗಳಲ್ಲಿ ಕಬ್ಬಿಗೂ ಬೆಂಬಲ ಬೆಲೆ ಘೋಷಿಸುವುದಾಗಿ ಸರ್ಕಾರ ಹೇಳಿದೆ.

- Call for authors -

LEAVE A REPLY

Please enter your comment!
Please enter your name here