ನೂತನ ಶಿಕ್ಷಣ ನೀತಿಯಿಂದ ಇನ್ಸ್‌ಪೆಕ್ಷನ್‌ ರಾಜ್‌ಗೆ ಅಂತ್ಯ : ಡಿಸಿಎಂ

0
4

ಬೆಂಗಳೂರು: ಕೇಂದ್ರ ಸರಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಭ್ರಷ್ಟಾಚಾರ, ವಿಳಂಬತೆಗೆ ಕಾರಣವಾಗಿದ್ದ ʼಇನ್ಸ್‌ಪೆಕ್ಷನ್‌ ರಾಜ್‌ʼ ಪದ್ಧತಿಗೆ ಅಂತ್ಯ ಹಾಡಲಿದೆ ಎಂದಿರುವ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಇನ್ನು ಮುಂದೆ ಪೂರ್ಣವಾಗಿ ʼರಿಪೋರ್ಟಿಂಗ್‌ ರಾಜ್ʼ ಜಾರಿಗೆ ಬರಲಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಸಿಇಟಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, “ಶಿಕ್ಷಣ ಸಂಸ್ಥೆಗಳಿಗೆ ಹೋದ್ವಿ, ಸಭೆ ಮಾಡಿದ್ವಿ, ಅವರು ಹೇಳಿದ್ದನ್ನು ಕೇಳಿಕೊಂಡು ಬಂದ್ವಿ ಅನ್ನೋದೆಲ್ಲ ಇಲ್ಲ. ಎಲ್ಲರೂ ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು. ಬರೀ ಸಭೆ, ಪರಿಶೀಲನೆಯಲ್ಲಿ ಕಾಲಹರಣಕ್ಕೆ ಅವಕಾಶ ಇರುವುದಿಲ್ಲ. ಬದಲಿಗೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳೇ ತಮ್ಮಲ್ಲಿನ ಸೌಲಭ್ಯಗಳ ಬಗ್ಗೆ ಸ್ವಯಂ ಘೋಷಣೆ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ಬೇರೊಬ್ಬರು ಹೋಗಿ ನೋಡಿ, ತಪಾಸಣೆ ಮಾಡುವ ಅಗತ್ಯ ಇರುವುದಿಲ್ಲ. ಹೀಗಾಗಿ ಅದನ್ನು ಅನುಷ್ಠಾನಕ್ಕೆ ತರಲು ನಾವು ಕಾತುರತೆಯಿಂದ ಇದ್ದೇವೆ” ಎಂದು ಡಿಸಿಎಂ ಹೇಳಿದರು.

ಮೂರು ತಿಂಗಳ ಹಿಂದೆಯೇ ಕರಡು ಪ್ರತಿ ಕೈಸೇರಿದ ಕೂಡಲೇ ಸರಕಾರ ಉನ್ನತಮಟ್ಟದ ಕಾರ್ಯಪಡೆ ರಚಿಸಿತ್ತಲ್ಲದೆ, ಅದರಡಿಯಲ್ಲಿ ಹಲವು ಉಪ ಸಮಿತಿಗಳನ್ನೂ ರಚಿಸಲಾಗಿತ್ತು. ಶಿಕ್ಷಣ ನೀತಿಯನ್ನು ಇತರೆ ರಾಜ್ಯಗಳಿಗಿಂತ ಮೊದಲೇ ಜಾರಿ ಮಾಡಲು ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ನೀತಿಯ ಮೂಲಕ ರಾಜ್ಯಕ್ಕೆ ತುಂಬಾ ಒಳ್ಳೆಯದು ಆಗುತ್ತದೆ, ನಮ್ಮ ಭಾರತ ಮುಂದಿನ ದಿನಗಳಲ್ಲಿ ಜಗತ್ತಿನ ಜ್ಞಾನದ ರಾಜಧಾನಿ ಆಗಲಿದೆ ಎಂದರು.

“ನನ್ನ ಅಭಿಪ್ರಾಯದಲ್ಲಿ ಶಿಕ್ಷಣ ನೀತಿಯೂ ಅತಿದೊಡ್ಡ ಸುಧಾರಣೆ. ಇದು ಅತ್ಯಗತ್ಯವಾಗಿತ್ತು ಕೂಡ. ದೇಶದ ಸಮಗ್ರ ಪ್ರಗತಿಗೆ ಇದು ಸಹಕಾರಿಯಾಗಲಿದೆ. ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಸಿಗುವುದಲ್ಲದೆ, ಆ ಸಂಸ್ಥೆಗಳ ಅರ್ಹತೆ ಮತ್ತು ಯೋಗ್ಯತೆಯ ಮೇರೆಗೆ ಎಲ್ಲವೂ ನಡೆಯಲಿದೆ. ಸದೃಢವಾದ ಇಚ್ಛಾಶಕ್ತಿಯೊಂದಿಗೆ ಈ ನೀತಿಯನ್ನು ನಾವು ಜಾರಿ ಮಾಡುತ್ತೇವೆ. ಇಂತಹ ಸಮಯದಲ್ಲಿ ರಾಜ್ಯದ ಉನ್ನತ ಶಿಕ್ಷಣ ಖಾತೆ ಹೊಂದಿರುವ ನಾನೇ ಭಾಗ್ಯಶಾಲಿ ಎಂದು ವಿನಮ್ರನಾಗಿ ಹೇಳಲು ಬಯಸುತ್ತೇನೆ” ಎಂದು ಅವರು ಸಂತಸ ವ್ಯಕ್ತಪಡಿಸಿದರು.

ನಮ್ಮ ರಾಜ್ಯದವರೇ ಆದ ಡಾ. ಕಸ್ತೂರಿ ರಂಗನ್ ಸಮಿತಿಯ ಅಧ್ಯಕ್ಷರಾಗಿದ್ದರು. ಪ್ರೊ. ಎಂ.ಕೆ. ಶ್ರೀಧರ್, ಡಾ. ತೇಜಸ್ವಿ ಕಟ್ಟೀಮನಿ ಸದಸ್ಯರಾಗಿದ್ದರು. ಹೀಗಾಗಿ ಈ ನೀತಿಯಲ್ಲಿ ರಾಜ್ಯದ ಪ್ರಭಾವ ಸಾಕಷ್ಟಿದೆ. ದೇಶವನ್ನು ಸುಸ್ಥಿರವಾಗಿ ಅಭಿವೃದ್ಧಿಯತ್ತ ಮುನ್ನಡೆಸುವ ಶಕ್ತಿ ಇರುವ ಈ ನೀತಿಯನ್ನು ಎಲ್ಲ ರೀತಿಯಲ್ಲೂ ಜಾರಿ ಮಾಡಲಾಗುವುದು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಾನು ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಜತೆ ಸಮಾಲೋಚಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

20 ರಂದು ಕಾರ್ಯಪಡೆ ವರದಿ:
ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ. ರಂಗನಾಥ್ ಅವರ ನೇತೃತ್ವದ ಕಾರ್ಯಪಡೆಯೂ ಉನ್ನತ ಶಿಕ್ಷಣದ ಮಟ್ಟಿಗೆ ಶಿಕ್ಷಣ ನೀತಿಯಲ್ಲಿನ ಅಂಶಗಳನ್ನು ಜಾರಿ ಮಾಡಲು ವರದಿ ಸಿದ್ಧಪಡಿಸುತ್ತಿದೆ. ಅಗಸ್ಟ್ 16ರಂದು ಹೇಗೆ ಜಾರಿ ಮಾಡಬೇಕೆಂಬ ಬಗ್ಗೆ ಒಂದು ವಿವರಣೆ ನೀಡಲಿದೆ. 20ರಂದು ಸಮಗ್ರ ವರದಿ ನೀಡಲಿದೆ. ಅದಾದ ಮೇಲೆ ಶಿಕ್ಷಣ ನೀತಿ ಜಾರಿಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

- Call for authors -

LEAVE A REPLY

Please enter your comment!
Please enter your name here