Video-ಮುಖ್ಯಮಂತ್ರಿಗಳೇ, ರೈತರ ಹೊಲ, ಗದ್ದೆಗೂ ಎಕರೆಗೆ 10 ಸಾವಿರ ಪರಿಹಾರ ಘೋಷಿಸಿ:ಡಿಕೆಶಿ

0
1

ಬೆಂಗಳೂರು: ಬಿಜೆಪಿ ಆಡಳಿತದಲ್ಲಿ ರಾಜ್ಯದ ಅನ್ನದಾತ ಅನಾಥನಾಗಿದ್ದಾನೆ ಎಂದು ಟೀಕಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿಗಳೇ, ರೈತರ ಹೊಲ, ಗದ್ದೆಗೂ ಎಕರೆಗೆ 10 ಸಾವಿರ ಪರಿಹಾರ ಘೋಷಿಸಿ ಎಂದು ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಡಿಕೆ ಶಿವಕುಮಾರ್, ಕೋವಿಡ್ ಸಮಯದಲ್ಲಿ ಬೆಳೆಗೆ ಮಾರುಕಟ್ಟೆ ಕಲ್ಪಿಸದ ಬಿಜೆಪಿ ಸರ್ಕಾರ ರೈತರನ್ನು ನಡುನೀರಲ್ಲಿ ಕೈಬಿಟ್ಟಿತ್ತು.ಬರೀ ಬಾಯಿ ಮಾತಲ್ಲಿ ಪರಿಹಾರ ಘೋಷಿಸಿ ಅದು ರೈತರ ಕೈ ಸೇರದಂತೆ ಮಾಡಿದೆ. ಕಳೆದ ಮೂರು ವರ್ಷಗಳಿಂದ ನಿರಂತರ ನೆರೆ ಬಂದರೂ ಸರಿಯಾಗಿ ಪರಿಹಾರ ನೀಡದೆ ರೈತರ ಜೀವ ಹಿಂಡುತ್ತಿದೆ ಎಂದು ಟೀಕಿಸಿದ್ದಾರೆ.

ಈ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ರೈತರ ಬೆಳೆ ಜಮೀನಿನಲ್ಲೇ ನೀರು ಪಾಲಾಗಿದೆ. ಲಕ್ಷಾಂತರ ಹೆಕ್ಟೇರ್ ನಲ್ಲಿ ಬೆಳೆದ ಭತ್ತ, ರಾಗಿ, ಮೆಕ್ಕೆಜೋಳ, ತರಕಾರಿ, ಹಣ್ಣು, ಕಾಫಿ ಮತ್ತಿತರ ಬೆಳೆಗಳು ಕಟಾವಿನ ಸಮಯದಲ್ಲಿ ಮಳೆಯಿಂದಾಗಿ ಕೊಳೆಯುತ್ತಿವೆ. ಈ ವರ್ಷ ಮುಂಗಾರು ವೇಳೆ ಬಂದ ನೆರೆಗೆ ಹಾನಿಯಾದ ಬೆಳೆಗೆ ಸರ್ಕಾರ ಘೋಷಿಸಿದ ಪರಿಹಾರ ಇನ್ನೂ ರೈತರಿಗೆ ಸಿಕ್ಕಿಲ್ಲ ಎಂದು ಆರೋಪಿಸಿದ್ರು.

ಫಸಲ್ ಭೀಮಾದಿಂದ ರೈತರಿಗೆ ಅನ್ಯಾಯ:

ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದರೆ ರೈತರಿಗೆ ನೆರವಾಗಲು ಫಸಲ್ ಭಿಮಾ ಯೋಜನೆ ಜಾರಿಗೆ ತಂದಿದ್ದು, ಅದು ರೈತರಿಗೆ ನ್ಯಾಯ ಒದಗಿಸುವ ಬದಲು ಅನ್ಯಾಯ ಮಾಡುತ್ತಿದೆ.ಈ ಯೋಜನೆಯಲ್ಲಿ ರೈತ ಬೆಳೆ ವಿಮೆ ನೋಂದಣಿಗೆ ಕಾಲಮಿತಿ ನಿಗದಿ ಮಾಡಲಾಗಿದೆ. ಆದರೆ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಲು ಈ ಕಾಲಮಿತಿ ಅನ್ವಯ ಆಗುತ್ತಿಲ್ಲ.ರೈತರು ಸರಿಯಾದ ಸಮಯದಲ್ಲಿ ಬೆಳೆ ವಿಮೆ ಕಂತು ಕಟ್ಟಿದರೂ, ಅವರಿಗೆ ಪರಿಹಾರ ಸಿಗುತ್ತಿಲ್ಲ. 45 ದಿನಗಳ ಒಳಗೆ ಪರಿಹಾರ ಸಿಗಬೇಕು. ಆದರೆ ಬೆಳೆ, ಪಹಣಿ, ಆಧಾರ್ ಸಂಖ್ಯೆ ಹೊಂದಾಣಿಕೆ ಇಲ್ಲ ಎಂಬ ತಾಂತ್ರಿಕ ಅಂಶಗಳ ನೆಪವೊಡ್ಡಿ ಪರಿಹಾರ ನಿರಾಕರಿಸಲಾಗುತ್ತಿದೆ.ಸಾಲ ಮಾಡಿ ಬೆಳೆದ ಬೆಳೆ ಕೈ ಸೇರುವ ಹೊತ್ತಲ್ಲಿ ನಾಶವಾದರೆ ರೈತನ ಪರಿಸ್ಥಿತಿ ಏನಾಗಬೇಕು? ಅವನು ಎಲ್ಲಿಗೆ ಹೋಗಬೇಕು? ಎಂದು ಪ್ರಶ್ನಿಸಿದ್ರು.

ಎಕರೆ ಹೊಲ, ಗದ್ದೆಗೆ 10 ಸಾವಿರ ಪರಿಹಾರ ಕೊಡಿ:

ಮುಖ್ಯಮಂತ್ರಿಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಮನೆಗಳಿಗೆ ನೀರು ನುಗ್ಗಿದರೆ 10 ಸಾವಿರ, ಮನೆ ಬಿದ್ದುಹೋದರೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಬಹಳ ಸಂತೋಷ. ಅದೇ ರೀತಿ ನೀರು ನುಗ್ಗಿರುವ ರೈತರ ಹೊಲ, ಗದ್ದೆಗಳಿಗೂ ಎಕರೆಗೆ ತಲಾ 10 ಸಾವಿರ ರು. ಪರಿಹಾರವನ್ನು ಸಿಎಂ ಬೊಮ್ಮಾಯಿಯವರು ತಕ್ಷಣ ಘೋಷಿಸಬೇಕು.ಸರ್ಕಾರ ಬೆಳೆ ನಾಶ ಸಮೀಕ್ಷೆ, ಅಧ್ಯಯನ, ಸಭೆ ನಂತರ ಪರಿಹಾರ ಅಂತ ಕಾಲಹರಣ ಮಾಡಬಾರದು.ಬೆಳೆ ಹಾನಿ ಬಗ್ಗೆ ತಕ್ಷಣ ರೈತರಿಂದ ಅರ್ಜಿ ಆಹ್ವಾನಿಸಬೇಕು‌. ತಹಶೀಲ್ದಾರ್ ಮೂಲಕ ಸ್ವೀಕರಿಸಬೇಕು. ಅಧಿಕಾರಿಗಳನ್ನು ಕೂಡಲೇ ಸ್ಥಳಕ್ಕೆ ಕಳುಹಿಸಿ, ವಿಡಿಯೋ, ಫೋಟೋ ತೆಗೆಸಿ, 30 ದಿನದೊಳಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದ್ರು.

ರಾಜ್ಯಾದ್ಯಂತ ನಮ್ಮ‌ ಪಕ್ಷದ ಕಾರ್ಯಕರ್ತರು ಬೆಳೆ ಹಾನಿ ಅರ್ಜಿ ಸಲ್ಲಿಸಲು ರೈತರಿಗೆ ನೆರವಾಗಬೇಕು. ಅವರ ಪರವಾಗಿ ಫೋಟೋ ತೆಗೆದು ತಹಶೀಲ್ದಾರ್ ಅವರಿಗೆ ಕಳುಹಿಸಿಕೊಡಿ. ರೈತರಿಗೆ ಪರಿಹಾರ ಸಿಗಲು ಶ್ರಮಿಸಿ ಎಂದು ಕರೆ ನೀಡಿದ ಡಿಕೆಶಿ
ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿ, ಅವರಿಗೆ ಊಟ, ವಸತಿ ಸೌಲಭ್ಯ ಕಲ್ಪಿಸಬೇಕು ಎಂದ್ರು.

ಇನ್ಸೂರೆನ್ಸ್ ಕಂಪನಿಗಳ ಜತೆ ಸರಕಾರ ಷಾಮೀಲು:

ಸರಕಾರ ಇನ್ಸೂರೆನ್ಸ್ ಕಂಪನಿಗಳ ಜತೆ ಷಾಮೀಲಾಗಿದೆ. ರೈತರ ಬದಲು ಇನ್ಸೂರೆನ್ಸ್ ಕಂಪನಿಗಳಿಗೆ ನೆರವಾಗುತ್ತಿದೆ.ರೈತರಿಗೆ ಮಧ್ಯಂತರ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ (NDRF) ಸರಿಯಾದ ಪ್ರಯೋಜನ ಇಲ್ಲ. ಅದರಿಂದ ಬಂದಷ್ಟು ಬರಲಿ. ಆದರೆ ರಾಜ್ಯ ಸರಕಾರದಿಂದ ಪೂರ್ಣ ಪ್ರಮಾಣದ ಪರಿಹಾರ ಸಿಗಬೇಕು.ಹಿಂದೆ ಯಡಿಯೂರಪ್ಪನವರು ನುಡಿದಂತೆ ಪರಿಹಾರ ಕೊಡಲಿಲ್ಲ. ನೆರೆಪೀಡಿತರು, ಕೋವಿಡ್ ಪೀಡಿತರು ಬಹಳ ಸಂಕಷ್ಟ ಅನುಭವಿಸಿದರು.ಈಗ ಬೆಳೆ, ಜಮೀನು ಹಾನಿ ಆಗಿರುವ ರೈತರಿಗೆ ಕಂದಾಯ ಮನ್ನಾ ಮಾಡಬೇಕು.
ಪರಿಹಾರ ಕೊಡದ ಇನ್ಸೂರೆನ್ಸ್ ಕಂಪನಿಗಳನ್ನು ಬ್ಲಾಕ್ ಲಿಸ್ಟ್ ಮಾಡಿ ರಾಜ್ಯದಿಂದ ಹೊರಗೆ ಕಳುಹಿಸಬೇಕು.ಸರಕಾರದ ಘೋಷಣೆಗಳು ಕಾಗದದ ಮೇಲಷ್ಟೇ ಉಳಿದಿವೆ. ಪೂರ್ತಿ ಮನೆ ಬಿದ್ದವರಿಗೆ 5 ಲಕ್ಷ ರು., ಅರ್ಧ ಮನೆ ಬಿದ್ದವರಿಗೆ ಒಂದು ಲಕ್ಷ ಪರಿಹಾರ ಅಂದರು. ಯಾರಿಗೆ ಕೊಟ್ಟಿದ್ದಾರೆ ಈ ಪರಿಹಾರ? ಎಂದಿದ್ದಾರೆ.

25 ಸಂಸದರಿಂದ ರಾಜ್ಯಕ್ಕೆ ಅನ್ಯಾಯ:

ಹಿಂದೆ ಮಳೆ, ನೆರೆ ಹಾನಿಯಿಂದ ಆದ ನಷ್ಟ 60 ಸಾವಿರ ಕೋಟಿ ಅಂದರು. ನಾವು ಲಕ್ಷ ಕೋಟಿ ರು. ನಷ್ಟ ಎಂದೆವು. ರಾಜ್ಯಕ್ಕೆ ಕೇಂದ್ರದಿಂದ ನಿರಂತರ ಅನ್ಯಾಯ ಆಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಎರಡರಿಂದಲೂ ಅನ್ಯಾಯವಾಗುತ್ತಿದೆ. ಈಗ ಆಗಿರುವ ಅನಾಹುತ ಹೊಸ ಸೇರ್ಪಡೆ. ರಾಜ್ಯದ 25 ಸಂಸದರು ಬಾಯಿಗೆ ಬೀಗ ಜಡಿದುಕೊಂಡಿದ್ದಾರೆ. ಅವರಿಂದ ನಮ್ಮ ರಾಜ್ಯಕ್ಕೆ ಬಹಳ ಅನ್ಯಾಯವಾಗುತ್ತಿದೆ. ರಾಜ್ಯದ ಪರವಾಗಿ ಕೇಂದ್ರಕ್ಕೆ ಅವರು ಒಂದೇ ಒಂದು ಅರ್ಜಿ ಕೊಟ್ಟಿಲ್ಲ ಎಂದ್ರು.

ಬಿಜೆಪಿ ಮುಗಿಸಲು ಸಿ.ಟಿ. ರವಿ ಸಾಕು:

ಸಿ.ಟಿ. ರವಿ ದೇಶದ ಇಮೇಜ್ ಗೆ ಧಕ್ಕೆ ತರುತ್ತಿದ್ದಾರೆ. ಅವರನ್ನು ಬಿಜೆಪಿ ಯಾಕೆ ಇಟ್ಟುಕೊಂಡಿದೆಯೋ ಗೊತ್ತಿಲ್ಲ. ಬಿಜೆಪಿ ಮುಗಿಸೋಕೆ ಅವರೊಬ್ಬರೇ ಸಾಕು. ಅವರು ಬಹಳ ಒಳ್ಳೊಳ್ಳೆ ದೇಶಪ್ರೇಮಿ ಸ್ಟೇಟ್ ಮೆಂಟ್ ಕೊಡ್ತಿದ್ದಾರೆ. ಅದರಿಂದ ಬಿಜೆಪಿಗೂ ಡ್ಯಾಮೇಜ್ ಆಗ್ತಿದೆ. ಅದಕ್ಕೆ ನಾವೂ ಸುಮ್ನೆ ಇದ್ದೇವೆ.

- Call for authors -

LEAVE A REPLY

Please enter your comment!
Please enter your name here