ಸಿಇಟಿ ಪರೀಕ್ಷೆ ಯಶಸ್ವಿ; ಡಿಸಿಎಂ ಸಂತಸ

0
2

ಬೆಂಗಳೂರು: ಕೋವಿಡ್-19 ಸವಾಲಿನ ನಡುವೆಯೂ ಮೊದಲ ದಿನದ ಸಿಇಟಿ ಪರೀಕ್ಷೆಯನ್ನು ರಾಜ್ಯ ಸರಕಾರ ಯಶಸ್ವಿಯಾಗಿ ನಡೆಸಿದ್ದು, ಕೊರೋನಾ ಪಾಸಿಟೀವ್ ಬಂದಿದ್ದ ವಿದ್ಯಾರ್ಥಿಗಳು ಕೂಡ ತಮಗೆ ನಿಗದಿ ಮಾಡಲಾಗಿದ್ದ ಪ್ರತ್ಯೇಕ ಜಾಗಗಳಲ್ಲಿಯೇ ನಿರಾತಂಕವಾಗಿ ಪರೀಕ್ಷೆ ಬರೆದರು.

ಬೆಂಗಳೂರಿನಲ್ಲಿ ಬುಧವಾರ ಸಂಜೆ ಆನ್ ಲೈನ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಸಂತಸ ವ್ಯಕ್ತಪಡಿಸಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಬಲವಾದ ಇಚ್ಛಾಶಕ್ತಿ ಮತ್ತು ಉತ್ತಮ ತಂಡವಿದ್ದರೆ ಇಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು ಎಂಬುದನ್ನು ಸಿಇಟಿ ಪ್ರರೀಕ್ಷೆ ಸಾಬೀತುಪಡಿಸಿದೆ ಎಂದರು.

ಮೊತ್ತ ಮೊದಲಿಗೆ ಎಲ್ಲ ಸವಾಲುಗಳ ನಡುವೆಯೂ ಧೈರ್ಯವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳಿಗೂ ಹಾಗೂ ಒಂದು ಸಮಷ್ಠಿ ತಂಡವಾಗಿ ಕೆಲಸ ಮಾಡಿ ಸೈ ಎನಿಸಿಕೊಂಡ ಆರೋಗ್ಯ, ಉನ್ನತ ಶಿಕ್ಷಣ, ಸಾರಿಗೆ, ಬಿಬಿಎಂಪಿ, ಎಲ್ಲ ಜಿಲ್ಲಾಡಳಿತಗಳು ಹಾಗೂ ಪ್ರತ್ಯಕ್ಷ- ಪರೋಕ್ಷವಾಗಿ ಈ ಪ್ರಕ್ರಿಯೆಯಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಅಭಾರಿಯಾಗಿದ್ದೇನೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಉತ್ತಮ ಹಾಜರಾತಿ:

ಮೊದಲ ದಿನವಾದ ಬುಧವಾರ ಬೆಳಗ್ಗೆ ಜೀವಶಾಸ್ತ್ರ ಹಾಗೂ ಮಧ್ಯಾಹ್ನ ಗಣಿತ ಪರೀಕ್ಷೆ ನಡೆಯಿತು. ಜೀವಶಾಸ್ತ್ರಕ್ಕೆ 1,94,419 ವಿದ್ಯಾರ್ಥಿಗಳು ನೋಂದಾಯಿತರಾಗಿ 1,47,491 ಮಂದಿ ಹಾಜರಾಗಿದ್ದರು. ಒಟ್ಟು ಹಾಜರಾತಿ ಶೇ.75.89ರಷ್ಟಿತ್ತು. ಕಳೆದ ವರ್ಷ ಇದೇ ವಿಷಯದಲ್ಲಿ 1,48,022 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಇನ್ನು ಗಣಿತ ವಿಷಯಕ್ಕೆ ಬಂದರೆ, 1,94,419 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರೆ, 1,73,408 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ ಶೇ.89.22ರಷ್ಟು ಹಾಜರಾತಿ ಇದೆ. ಕಳೆದ ವರ್ಷ ಗಣಿತವನ್ನು 1,84,022 ಮಂದಿ ಬರೆದಿದ್ದರು. ಕಳೆದ ವರ್ಷ ಸಿಇಟಿ ಗೆ ಮೊದಲು ದ್ವಿತೀಯ ಪಿಯುಸಿ ಫಲಿತಾಂಶ ಬಂದಿರಲಿಲ್ಲ, ಈ ವರ್ಷ ಬಂದಿದ್ದು ಅರ್ಹರಷ್ಟೇ ಪರೀಕ್ಷೆ ಬರೆದಿದ್ದಾರೆ ಎಂದು ಡಿಸಿಎಂ ಮಾಹಿತಿ ಕೊಟ್ಟರು.

ಕೋವಿಡ್ ಪಾಸಿಟೀವ್ ವಿದ್ಯಾರ್ಥಿಗಳು:

ರಾಜ್ಯದಲ್ಲಿ ಒಟ್ಟು 60 ಮಂದಿ ಕೋವಿಡ್ ಪಾಸಿಟೀವ್ ಬಂದಿದ್ದ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಗಣಿತದಲ್ಲಿ 57, ಜೀವಶಾಸ್ತ್ರದಲ್ಲಿ 49 ವಿದ್ಯಾರ್ಥಿಗಳು  ಪರೀಕ್ಷೆಗೆ ಹಾಜರಾಗಿದ್ದರು. ಇವರದು ಪೂರ್ಣ ಹಾಜರಾತಿ ಎಂದೇ ಹೇಳಬಹುದು. ಇನ್ನು ಬೆಂಗಳೂರಿನಲ್ಲಿ ಎರಡು ಕೇಂದ್ರಗಳಲ್ಲಿ ಪಾಸಿಟೀವ್ ವಿದ್ಯಾರ್ಥಿಗಳಿಗೆ ಸ್ಥಳ ನಿಗದಿ ಮಾಡಲಾಗಿತ್ತು. ಕೋವಿಡ್ ಆರೈಕೆ ಕೇಂದ್ರಗಳಿರುವ ಜ್ಞಾನಭಾರತಿ ಪರೀಕ್ಷಾ ಕೇಂದ್ರದಲ್ಲಿ 6 ಹಾಗೂ ಜಿಕೆವಿಕೆ ಕೇಂದ್ರದಲ್ಲಿ 4 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ನಾನೂ ಸಹ ಜಿಕೆವಿಕೆ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಇದೇ ಮೊದಲ ಬಾರಿಗೆ ಕೋವಿಡ್ ಆರೈಕೆ ಕೇಂದ್ರದೊಳಕ್ಕೆ ಹೋಗಿದ್ದೆ. ಆ ವಿದ್ಯಾರ್ಥಿಗಳು ಅತ್ಯಂತ ಧೈರ್ಯವಾಗಿ ಪರೀಕ್ಷೆ ಬರೆದಿದ್ದನ್ನು ಕಣ್ಣಾರೆ ಕಂಡೆ. ಅಲ್ಲಿನ ಹಿರಿಯ ವೈದ್ಯರೇ ಪರೀಕ್ಷೆಯ ಮೇಲ್ವಿಚಾರಕರಾಗಿದ್ದರು. ಆ ನಾಲ್ವರು ವಿದ್ಯಾರ್ಥಿಗಳಿಗಾಗಿ ಹತ್ತಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಪಾಸಿಟೀವ್ ಅಭ್ಯರ್ಥಿಗಳಿಗೆ ಪ್ರತ್ಯೇಕ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಎಸ್’ಪಿಒ ಪ್ರಕಾರವೇ ಕಂಟೈನ್ಮೆಂಟ್ ಝೋನ್’ನಿಂದ ಹೊರಬಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗಿದ್ದರು. ಎಲ್ಲೂ ಒಂದು ಸಣ್ಣ ಲೋಪವೂ ಇಲ್ಲದೆ ಮೊದಲ ದಿನದ ಪರೀಕ್ಷೆ ಮುಕ್ತಾಯವಾಗಿದೆ ಎಂದು ಡಿಸಿಎಂ ಹೇಳಿದರು.

ರಾಮನಗರ, ಚಿಕ್ಕೋಡಿ, ವಿಜಯಪುರ, ದಾವಣಗೆರೆ, ಗದಗ, ಹಾವೇರಿ, ಕೋಲಾರ, ಉತ್ತರ ಕನ್ನಡ, ತುಮಕೂರು, ಕೊಡಗು ಹೊರತುಪಡಿಸಿ ಉಳಿದ 22 ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟೀವ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದ ಅವರು, ಇನ್ನು 10-15 ದಿನಗಳಲ್ಲಿ ಫಲಿತಾಂಶ ಹೊರಬರಲಿದೆ. ಈ ವರ್ಷ ಕೌನ್ಸೆಲಿಂಗ್ ಸೇರಿ ಎಲ್ಲವೂ ಆನ್’ಲೈನ್’ನಲ್ಲಿಯೇ ನಡೆಯಲಿದೆ. ವಿದ್ಯಾರ್ಥಿಗಳು ನೇರವಾಗಿ ಕಾಲೇಜಿಗೇ ಹೋಗಿ ಪ್ರವೇಶ ಪಡೆಯಬಹುದು ಎಂದು ಅವರು ತಿಳಿಸಿದರು.

- Call for authors -

LEAVE A REPLY

Please enter your comment!
Please enter your name here