ಸಮಸಮಾಜ ನಿರ್ಮಾಣದ ಕನಸು ಕಂಡಿದ್ದ ಬಸವಣ್ಣ: ಬಿ.ಎಸ್.ಯಡಿಯೂರಪ್ಪ

0
1

ಮೈಸೂರು, ಜನವರಿ.23: ವರ್ಗ, ವರ್ಣ, ಜಾತಿ, ಮತ ಮತ್ತು ಲಿಂಗ ತಾರತಮ್ಯವಿಲ್ಲದ ಸಮ-ಸಮಾಜ ನಿರ್ಮಾಣದ ಕನಸನ್ನು 12ನೇ ಶತಮಾನದಲ್ಲಿ ಭಿತ್ತಿದವರು ಬಸಣ್ಣನವರು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

ಮೈಸೂರಿನ ವಿಜಯನಗರದಲ್ಲಿ ಬಸವ ಸಮಿತಿ ವತಿಯಿಂದ ನಿರ್ಮಿಸಿದ ಬಸವ ಭವನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾನತೆ, ಕಾಯಕ, ದಾಸೋಹದ ತತ್ವಗಳನ್ನು ಬೋಧಿಸಿದ್ದಲ್ಲದೆ ಅದನ್ನು ಆಚರಿಸಿದ ಮಹಾನ್ ಮಾನವತವಾದಿ ಬಸವಣ್ಣನವರು. ಅವರು ರಚಿಸಿದ ವಚನದ ಸತ್ವ, ಸಂದೇಶಗಳು ಸರ್ವಕಾಲಿಕವಾದದ್ದು ಎಂದು ಹೇಳಿದರು.

ಜಗತ್ತಿನ ಮೊದಲ ಸಂಸತ್ ಎಂದೆ ಪರಿಗಣಿಸಲಾಗಿದ್ದ ಅನುಭವ ಮಂಟಪವು ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿತ್ತು. ಇಂದು ಅದೇ ಬಸವ ಕಲ್ಯಾಣದಲ್ಲಿ ಭವ್ಯವಾದಂತಹ ಅನುಭವ ಮಂಟಪ ನಿರ್ಮಾಣಕ್ಕೆ 500 ಕೋಟಿ ಮಂಜೂರು ಮಾಡಲಾಗಿದ್ದು, ಕಾಮಗಾರಿ ನಡೆಯುತ್ತಿದೆ. ಅದು ದೇಶದ ಜನರ ಗಮನ ಸೆಳೆಯುವಂತಹ ಅತ್ಯಂತ ಭವ್ಯವಾದಂತಹ ಕಟ್ಟಡ ಆಗಲಿದೆ ಎಂದರು.

ಅಲ್ಲಮ ಪ್ರಭು, ಅಕ್ಕ ಮಹಾದೇವಿಯವರಿಗೆ ಜನ್ಮಕೊಟ್ಟಂತಹ ನಾಡು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ. ಅಕ್ಕ ಮಹಾದೇವಿ ಹುಟ್ಟಿದ ಸ್ಥಳದಲ್ಲಿ ಹತ್ತಾರು ಕೋಟಿ ಖರ್ಚುಮಾಡಿ ಅಭಿವೃದ್ಧಿ ಕಾರ್ಯಗಳು ಈಗಾಗಲೇ ಪ್ರಾರಂಭವಾಗಿದ್ದು, ಇನ್ನು 2 ವರ್ಷದೊಳಗಾಗಿ ಪೂರ್ಣವಾಗುವ ಭರವಸೆಯನ್ನು ನೀಡಿದರು.

12ನೇ ಶತಮಾನದಲ್ಲಿ ಹುಟ್ಟಿದ ಅನೇಕ ಶರಣ, ಶರಣೆಯರಿಗೆ ಜನ್ಮಕೊಟ್ಟಂತಹ ಕರ್ಮಭೂಮಿ, ಧರ್ಮಭೂಮಿ, ಭವ್ಯಭೂಮಿಯಾಗಿದೆ ಈ ನಾಡು. ಇವರೆಲ್ಲರ ನೆನಪನ್ನು ಮುಂದಿನ ಪೀಳಿಗೆಗೆ ಉಳಿಸುವ ಚಿಂತನೆಯನ್ನು ಮಾಡುತ್ತಿದ್ದು, ಇದಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನಗಳ ಮೂಲಕ ಬಸವಣ್ಣನವರು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅಂದಿನ ಕಾಲಕ್ಕೆ ಪ್ರಜಾಪ್ರಭುತ್ವ ಸಮಾಜದಲ್ಲಿ ಸ್ತ್ರೀ ಸಮಾನತೆ, ಮಹಿಳಾ ಶಿಕ್ಷಣ, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅನುಭವ ಮಂಟಪವನ್ನು ಹಲವು ಬಾರಿ ನೆನಪು ಮಾಡಿಕೊಂಡು ಬಸವಣ್ಣ ಮತ್ತು ಅಕ್ಕ ಮಹಾದೇವಿಯವರ ವಿಚಾರಧಾರೆಗಳನ್ನು ದೇಶದ ಜನರಿಗೆ ತಿಳಿಸುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಲ್. ನಾಗೇಂದ್ರ, ತನ್ವೀರ್ ಸೇಠ್, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಹೊಸಮಠದ ಶ್ರೀಗಳಾದ ಚಿದಾನಂದ ಸ್ವಾಮೀಜಿ ಸೇರಿದಂತೆ ಇತರರು ಹಾಜರಿದ್ದರು.

- Call for authors -

LEAVE A REPLY

Please enter your comment!
Please enter your name here